ಹೈದರಾಬಾದ್ : ನಗರದ ನಾಂಪಲ್ಲಿ ಪ್ರದೇಶದ ವಸತಿ ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಎರಡು ಕುಟುಂಬಗಳಿಗೆ ಸೇರಿದ 9 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದು,ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜ್ವಾಲೆಯ ಜತೆಗೆ ಕಟ್ಟಡದ ಮೇಲೆ ಹರಡಿದ ಹೊಗೆಯನ್ನು ಉಸಿರಾಡಿದ ನಂತರ ಒಂಬತ್ತು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು ಮತ್ತು ರಕ್ಷಣಾ ತಂಡಗಳು ಅವರನ್ನು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದವು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ಕಾರ್ಯಾಚರಣೆ ಮತ್ತು ರಕ್ಷಣ ಕಾರ್ಯಗಳನ್ನು ಕೈಗೊಂಡ ಅಗ್ನಿಶಾಮಕ ಸಿಬಂದಿ, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಬೆಳಗ್ಗೆ 9.34 ಕ್ಕೆ ಕರೆ ಬಂದಿದ್ದು, ತತ್ ಕ್ಷಣ ಅಗ್ನಿಶಾಮಕ ಟೆಂಡರ್‌ಗಳು ಪ್ರದೇಶಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದವು. ಪೋಲೀಸರ ಪ್ರಕಾರ, ಬೆಂಕಿ ಕೆಮಿಕಲ್ಸ್ ಹೊಂದಿರುವ ಕೆಲವು ಡ್ರಮ್‌ಗಳಿಗೆ ಹೊತ್ತಿಕೊಂಡ ನಂತರ ಅಪಾರ್ಟ್‌ಮೆಂಟ್ ಸಂಕೀರ್ಣದ ಸ್ಟಿಲ್ಟ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ಅದು ಕಟ್ಟಡದ ಮೇಲಿನ ಭಾಗಕ್ಕೆ ವ್ಯಾಪಿಸಿತು. ಸಂಕೀರ್ಣವು ನೆಲ ಮತ್ತು ನಾಲ್ಕು ಮೇಲಿನ ಮಹಡಿಗಳನ್ನು ಹೊಂದಿದೆ.
ಬೆಂಕಿಯ ಕಾರಣದ ಕುರಿತು, ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ನೆರೆಹೊರೆಯಲ್ಲಿ ತಂಗಿದ್ದ ಕೆಲವು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆ ಪ್ರದೇಶದಲ್ಲಿ ಕೆಲವು ಮಕ್ಕಳು ಸಿಡಿಸುವ ಪಟಾಕಿಗಳ ಕಿಡಿಗಳು ಡ್ರಮ್‌ಗಳ ಮೇಲೆ ಬಿದ್ದು ಬೆಂಕಿ ವ್ಯಾಪಿಸಿತು ಎಂದು ಹೇಳಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದರು.