ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ವಿವಿಧ ಜಿಲ್ಲೆಗಳ 9 ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ. ಅಧಿಕಾರಿಗಳಿಗೆ ಸೇರಿದ 36 ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬೆಂಗಳೂರು, ಬೆಳಗಾವಿ, ಉಡುಪಿ, ಗಂಗಾವತಿ, ಕೋಲಾರ, ರಾಮನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.
ಬೆಂಗಳೂರಿನ ಬಸವನಗುಡಿ, ಚಿಕ್ಕಪೇಟೆ ವಿಭಾಗದ ಘನ ತ್ಯಾಜ್ಯ ನಿರ್ವಹಣೆ ಘಟಕದ ಎಇಇ ಆರ್. ಗಂಗಾಧರ್ ಹೆಸರಿನಲ್ಲಿರುವ ನಂದಿನಿ ಲೇಔಟ್‌ನ ಮನೆ, ಕಚೇರಿ ಹಾಗೂ ಕೆಜಿಐಡಿ ಎಸ್.ಬಿ.ಅಧೀಕ್ಷಕ ರುದ್ರಪ್ರಸಾದ್‌ಗೆ ಸೇರಿದ ಮಲ್ಲತ್ತಹಳ್ಳಿ, ಬನಶಂಕರಿ, ತುಮಕೂರಿನ ಮನೆಗಳು ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ರಾಮನಗರದ ಮಾಗಡಿ ತಾಲೂಕಿನ ಬಣವಾಡಿ ವೈದ್ಯಕೀಯ ಅಧಿಕಾರಿ ಡಾ.ರಘುನಾಥ್‌ಗೆ ಸೇರಿದ ಕುದೂರಿನ ಮನೆ, ಖಾಸಗಿ ಕ್ಲಿನಿಕ್ ಮತ್ತು ಬಣವಾಡಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲೆ ಮತ್ತಿತರ ಆಸ್ತಿ ಶೋಧ ಕಾರ್ಯ ನಡೆದಿದೆ. ಬೆಳಗಾವಿಯ ಅಥಣಿಯ ಹಿಪ್ಪರಗಿ ಅಣೆಕಟ್ಟು ಯೋಜನೆ ವಿಶೇಷ ಭೂಸ್ವಾಧೀನ ಅಧಿಕಾರಿ ರಾಜಶ್ರೀ
ಜೈನಾಪುರ, ಗಂಗಾವತಿ ಗ್ರಾಮೀಣ ಕುಡಿಯುವ ನೀರು ಉಪ ವಿಭಾಗದ ಮತ್ತು (ಪ್ರಭಾರ) ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಂಚಾಯತ್ ರಾಜ್ ಎಂಜಿನಿಯರ್ ಪಿ. ವಿಜಯ್‌ಕುಮಾರ್, ಕೋಲಾರದ ಶ್ರೀನಿವಾಸಪುರ ತಾಲೂಕಿನ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಸಹಾಯಕ ಅಭಿಯಂತರ ಎನ್.ಅಪ್ಪಿ ರೆಡ್ಡಿ, ಉಡುಪಿಯ ಬಕಾರಿ ಉಪ ಅಧೀಕ್ಷಕ ವಿನೋದ್ ಕುಮಾರ್, ಚಿಕ್ಕಮಗಳೂರಿನ ಆರ್‌ಟಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಸಿ.ವಿರೂಪಾಕ್ಷ, ಕಡೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಪಿ. ಶಿವಕುಮಾರ್‌ಗೆ ಸೇರಿರುವ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.