ಮಾಸ್ಕೊ: ರಷ್ಯಾದ ಟಾಟರ್ಸ್ತಾನ್ ಪ್ರಾಂತ್ಯದ ಕಜಾನ್ ನಗರದ ಮೇಲೆ 9/11 ಶೈಲಿಯಲ್ಲಿ ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ಉಕ್ರೇನ್ ಶನಿವಾರ(ಡಿ21) ಬೆಳಗ್ಗೆ ಸಂಘರ್ಷವನ್ನು ತೀವ್ರಗೊಳಿಸಿದೆ. ಸ್ಥಳೀಯ ಪೊಲೀಸರ ಪ್ರಕಾರ, ದಾಳಿಗಳು ಬಹುಮಹಡಿ ವಸತಿ ಕಟ್ಟಡಗಳು ಮತ್ತು ಕೈಗಾರಿಕಾ ಸಂಕೀರ್ಣಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯನ್ನುಂಟುಮಾಡಿವೆ.
ಎಂಟು ಡ್ರೋನ್ಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಟಾಟರ್ಸ್ತಾನ್ ಗವರ್ನರ್ ರುಸ್ತಮ್ ಮಿನ್ನಿಖಾನೋವ್ ಅವರ ಪತ್ರಿಕಾ ಸಂಸ್ಥೆ ತಿಳಿಸಿದೆ. ಆರು ಡ್ರೋನ್ಗಳು ವಸತಿ ಕಟ್ಟಡಗಳಿಗೆ ಅಪ್ಪಳಿಸಿದ್ದು, ಒಂದು ಕೈಗಾರಿಕಾ ಸ್ಥಳಕ್ಕೆ ಅಪ್ಪಳಿಸಿದ್ದು, ಇನ್ನೊಂದನ್ನು ನದಿಗೆ ಹೊಡೆದುರುಳಿಸಲಾಗಿದೆ.
ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದ್ದು, ಕಜಾನ್ನ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ವಾರಾಂತ್ಯದಲ್ಲಿ ಎಲ್ಲಾ ದೊಡ್ಡ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರೊಂದಿಗೆ ರಾಜಿ ಮಾಡಿಕೊಳ್ಳುವ ಕುರಿತು ಚರ್ಚಿಸಲು ಸಿದ್ಧರಿದ್ದೇನೆ ಎಂದು ಹೇಳಿದ ನಂತರ ಈ ಭಾರೀ ದಾಳಿ ನಡೆದಿದೆ.