Advertisement

ತೀರಲಿ ಜನರ ಸಂಕಷ್ಟ : ಇಂದು ಬಿಎಸ್‌ವೈ 8ನೇ ಬಜೆಟ್‌

10:57 AM Mar 08, 2021 | Team Udayavani |

ಕೊರೊನಾ ಕಷ್ಟಕಾಲದ ಅನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಜೆಟ್‌ ಮಂಡನೆಯಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.  ಯಡಿಯೂರಪ್ಪ ತಮ್ಮ 8ನೇ ಬಜೆಟ್‌ ಮಂಡಿಸಲಿದ್ದಾರೆ. ಸೋಮವಾರ ಮಧ್ಯಾಹ್ನ 12.05ಕ್ಕೆ ಮುಂಗಡ ಪತ್ರ ಮಂಡನೆಯಾಗಲಿದೆ.

Advertisement

ಸಮತೋಲಿತ ಬಜೆಟ್‌ ಸಾಧ್ಯತೆ
ಕಳೆದ ಆರ್ಥಿಕ ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ, ಪ್ರವಾಹ ಹಾಗೂ ಬರದ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿ ಗಂಭೀರವಾಗಿರುವುದರಿಂದ ಸಮತೋಲಿತ ಬಜೆಟ್‌ ಮಂಡನೆ ಮಾಡಲಿದ್ದಾರೆ. ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅನುದಾನದಲ್ಲಿ ಶೇ. 60ರಷ್ಟು ಮಾತ್ರ ವೆಚ್ಚವಾಗಿದ್ದು, ಬಾಕಿ ಅನುದಾನವನ್ನೂ ಗಣನೆಗೆ ತೆಗೆದುಕೊಂಡು ಈ ವರ್ಷದ ಬಜೆಟ್‌ ಗಾತ್ರವನ್ನು ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಾಲ ಪ್ರಮಾಣ ಹೆಚ್ಚಳ ಸಾಧ್ಯತೆ?
ಈಗಾಗಲೇ ರಾಜ್ಯ ಸರಕಾರ ಕೊರೊನಾ ಸಂಕಷ್ಟದಿಂದ ಪಾರಾಗಲು ಬಾಹ್ಯ ಮೂಲದಿಂದ ಸಾಲ ಪಡೆಯಲು ನಿರ್ಧರಿಸಿದೆ. ಕೇಂದ್ರ ಕೂಡ ಆರ್ಥಿಕ ಶಿಸ್ತು ಕಾಯ್ದುಕೊಂಡು ಸಾಲ ಪಡೆಯಲು ಸೂಚಿಸಿರುವುದರಿಂದ ಸಾಲ ಪಡೆಯುವ ಪ್ರಮಾಣ ಹೆಚ್ಚಳ ಮಾಡುವ ಬಗ್ಗೆ ಘೋಷಿಸುವ ಸಾಧ್ಯತೆ ಇದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ರಾಜ್ಯ ಸರಕಾರಕ್ಕೆ ಆದಾಯ ಹೆಚ್ಚುತ್ತಿದೆ. ಅದರ ಆಧಾರದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡುವ ನಿರೀಕ್ಷೆ ಇದೆ.

ಹೊಸ ತೆರಿಗೆಯಿಲ್ಲ
ಕೊರೊನಾ ಕಾರಣದಿಂದ ರಾಜ್ಯ ಸರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಯಾವುದೇ ತೆರಿಗೆ ಕಡಿತ ಮಾಡದೇ, ಹೊಸ ತೆರಿಗೆಯನ್ನೂ ವಿಧಿಸದೇ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗದಂತೆ ಸಮತೋಲನ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.

ನೀರಾವರಿ ಯೋಜನೆಗಳಿಗೆ ಆದ್ಯತೆ
ಕೃಷ್ಣಾ ಕೊಳ್ಳ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದು ಹಾಗೂ ಕಡಿಮೆ ಪ್ರಮಾಣದಲ್ಲಿ ನೀರು ಬಳಸಿಕೊಂಡು ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಹನಿ ನೀರಾವರಿ ಯೋಜನೆಗೆ ಆದ್ಯತೆ ನೀಡುವ ಕುರಿತು ಘೋಷಿಸುವ ಸಾಧ್ಯತೆ ಇದೆ. ಮಹದಾಯಿ ಯೋಜನೆ ಆರಂಭಕ್ಕೆ ಅನುದಾನ, ತುಂಗಭದ್ರೆಗೆ ನವಲಿ ಬಳಿ ಸಮತೋಲನ ಅಣೆಕಟ್ಟೆ ಕಟ್ಟಲು ಹಣ ಮೀಸಲಿಡುವುದು. ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಹಣ ಮೀಸಲಿಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಿಸುವ ಸಾಧ್ಯತೆ ಇದೆ.

Advertisement

ಬಜೆಟ್‌ ನಿರೀಕ್ಷೆಗಳು
– ಆರೋಗ್ಯ ಕ್ಷೇತ್ರ
– ಕೃಷಿ ಯಂತ್ರೋಪಕರಣಗಳ ಖರೀದಿಗೆ ವಿಶೇಷ ರಿಯಾಯಿತಿ
– ಕೃಷಿಯಾಧಾರಿತ ಉದ್ಯಮಗಳ ಸ್ಥಾಪನೆಗೆ ಹೆಚ್ಚಿನ ರಿಯಾಯಿತಿ
– ಕೃಷಿ ಉತ್ಪನ್ನಗಳ ಖರೀದಿಗೆ ವಿಶೇಷ ಆವರ್ತ ನಿಧಿ
– ಪಡಿತರ ವ್ಯವಸ್ಥೆಯಲ್ಲಿ ಭತ್ತ, ರಾಗಿ, ಜೋಳ ಬಳಕೆ
– ಪ್ರತಿ ತಾಲೂಕಿಗೆ ಎರಡು ಗೋಶಾಲೆ ಒತ್ತುವರಿಯಾಗಿರುವ ಗೋಮಾಳ ಸ್ವಾಧೀನಕ್ಕೆ ಪ್ರತ್ಯೇಕ ನೀತಿ ಪ್ರಕಟ
– ಸಾರಿಗೆ ಸಂಸ್ಥೆಗಳ ಆರ್ಥಿಕ ಪುನಶ್ಚೇತನಕ್ಕಾಗಿ ಪರ್ಯಾಯ ಯೋಜನೆ
– ಸಮನ್ವಯಕ್ಕಾಗಿ ಕರ್ನಾಟಕ ಕೃಷಿ ಸಂಶೋಧನಾ ಪರಿಷತ್‌ ರಚನೆ
– ಮಹಿಳೆಯರ ಸ್ವಾವಲಂಬನೆಗೆ ವಿಶೇಷ ರಿಯಾಯಿತಿ ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next