Advertisement

ಜಗ್ಗೇಶ್‌ ಟೆಸ್ಟ್‌ ರೈಡ್‌

06:00 AM Sep 14, 2018 | |

ಪ್ರತಿಯೊಬ್ಬ ಕಲಾವಿದರಿಗೂ ತಮ್ಮ ಸಿನಿಮಾ, ಪಾತ್ರ ಯಾರಿಗೆ ಇಷ್ಟವಾಗಬಹುದು, ಯಾವ ವಯೋಮಾನದವರು ಮೆಚ್ಚಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ಕುತೂಹಲ­ವಿರುತ್ತದೆ. ಆದರೆ, ಅದನ್ನು ಅಷ್ಟೊಂದು ಸುಲಭವಾಗಿ ಅದನ್ನು ತಿಳಿದುಕೊಳ್ಳಲಾಗುವುದಿಲ್ಲ. ನಟ ಜಗ್ಗೇಶ್‌ ಮಾತ್ರ ತಮ್ಮ ಮನೆಯಲ್ಲೇ ತಮ್ಮ ಹೊಸ ಸಿನಿಮಾ “8ಎಂಎಂ’ ಪಾತ್ರ ಯಾವ್ಯಾವ ವಯೋಮಾನದವರಿಗೆ ಇಷ್ಟವಾಗಬಹುದು ಎಂಬುದನ್ನು ತಿಳಿದುಕೊಂಡಿದ್ದಾರೆ. ಅದು ಪತ್ನಿ, ಇಬ್ಬರು ಮಕ್ಕಳು ಹಾಗೂ ಮತ್ತೂಬ್ಬ ಸಂಬಂಧಿ ಮೂಲಕ. ಈ ನಾಲ್ವರು ಕೂಡಾ ಬೇರೆ ಬೇರೆ ವಯೋಮಾನದವರು. ಜಗ್ಗೇಶ್‌ ಇಷ್ಟು ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಯಾವತ್ತೂ ಕೂಡಾ ಅವರ ಪತ್ನಿ ಅವರನ್ನು ಹೊಗಳಿರಲಿಲ್ಲವಂತೆ. 

Advertisement

ಆದರೆ, “8 ಎಂಎಂ’ ಚಿತ್ರದ ಪಾತ್ರವನ್ನು ತುಂಬಾನೇ ಮೆಚ್ಚಿಕೊಂಡಿದ್ದಾರಂತೆ. “ನಾನು ಅಷ್ಟೊಂದು ಸಿನಿಮಾ ಮಾಡಿದರೂ ನನ್ನ ಹೆಂಡತಿ ಒಂದು ದಿನಾನೂ ಆ ಸಿನಿಮಾಗಳ ಬಗ್ಗೆ ಮಾತನಾಡಲಿಲ್ಲ. ಆದರೆ, “8ಎಂಎಂ’ ಬಗ್ಗೆ ಸಿಕ್ಕಾಪಟ್ಟೆ ಬಿಲ್ಡಪ್‌ ಕೊಟ್ಟು ಮಾತನಾಡು­ತ್ತಾಳೆ. ಫೋನ್‌ನಲ್ಲೂ ನನ್ನ ಪಾತ್ರದ ಬಗ್ಗೆ ಮಾತನಾಡುತ್ತಿರುತ್ತಾಳೆ. ಅಲ್ಲಿಗೆ ನನ್ನ ಹೆಂಡತಿ ವಯೋಮಾನದವರಿಗೆ ಈ ಪಾತ್ರ ಇಷ್ಟವಾಗಿದೆ. ಇನ್ನು ನನ್ನ ದೊಡ್ಡ ಮಗನನ್ನು ಪಾತ್ರದ ಬಗ್ಗೆ ಕೇಳಿದೆ. ಆತ ನಮ್ಮ ನಿರ್ದೇಶಕರ ವಯಸ್ಸಿನವ. ಆತನೂ ತುಂಬಾನೇ ಖುಷಿಯಿಂದ ಮಾತನಾಡಿದ. “ಈ ತರಹದ ಒಂದು ಚೇಂಜ್‌ ಓವರ್‌ನಲ್ಲಿ ನಿಮ್ಮನ್ನು ನೋಡಿ ಖುಷಿಯಾಯ್ತಪ್ಪ’ ಎಂದ. ನನ್ನ ಚಿಕ್ಕ ಮಗನಿಗೆ ಈಗ 26 ವರ್ಷ. ಆತನಲ್ಲೂ “ಮಗನೇ ಈ ಪಾತ್ರ ಹೇಗನಿಸ್ತಾ ಇದೆ’ ಎಂದು ಕೇಳಿದೆ. ಆತ ಅಂತೂ ಫ‌ುಲ್‌ ಎಕ್ಸೆ„ಟ್‌ ಆಗಿ, “ಏನ್‌ ಬಾಸ್‌ ನೀವೂ … ಏನ್‌ ಮಾಡ್ತಾ ಇದ್ದೀರಾ ಬಾಸ್‌ ನೀವು’ ಎಂದು ಮೆಚ್ಚಿಕೊಂಡ.

ಅಲ್ಲಿಗೆ ಮೂರು ವಯೋ­ಮಾನದವರಿಗೆ ಈ ಪಾತ್ರ ಇಷ್ಟ ಆದಂತಾಯಿತು. ನನ್ನ ಅಕ್ಕನ ಮಗನೊಬ್ಬನಿದ್ದಾನೆ. ಆತನಿಗೆ ಈಗ 20 ವರ್ಷ. ಆತ ಕಣ್ಣಲ್ಲಿ ನೀರಾಕಿ, “ನನ್ನ ಮಾವನ ಈ ತರಹ ನೋಡಬೇಕು ಎಂದು ಬಹಳ ದಿನಗಳಿಂದ ಆಸೆ ಪಟ್ಟಿದ್ದೆ. ನಿಮ್ಮನ್ನು ನೋಡಿದಾಗ ಥ್ರಿಲ್‌ ಆಗುತ್ತಿದೆ’ ಎಂದ. ಅಲ್ಲಿಗೆ ನಾಲ್ಕು ವಿಭಿನ್ನ ವಯೋಮಾನದವರಿಗೆ ಪಾತ್ರ ಇಷ್ಟವಾದಂತಾಯಿತು’ ಎನ್ನುತಾ ತಮ್ಮ ಸಿನಿಮಾವನ್ನು ಬೇರೆ ಬೇರೆ ವಯೋಮಾನ­ದವರು ಇಷ್ಟಪಟ್ಟ ಬಗ್ಗೆ ಹೇಳಿಕೊಂಡರು.ಒಂದು ಪಾತ್ರವನ್ನು ಬೇರೆ ಬೇರೆ ವಯೋಮಾನದವರು ಇಷ್ಟಪಟ್ಟಿರುವುದನ್ನು ಕಂಡ ಜಗ್ಗೇಶ್‌ ಅವರಿಗೆ ಒಂದು ವಿಚಾರ ಮನವರಿಕೆಯಾಗಿದೆ. ಅದು ಪ್ರೇಕ್ಷಕನ ಅಭಿರುಚಿ ಬದಲಾಗಿರುವುದು ಮತ್ತು ಆತ ನೈಜತೆಗೆ ಆದ್ಯತೆ ಕೊಡುತ್ತಿರುವುದು. 

“ಇವತ್ತು ವೈಭವೀಕರಿಸುವಂಥದ್ದನ್ನು, ಹೀರೋ ಹೊಡೆದರೆ 20 ಜನ ಸೈಡಿಗೆ ಹೋಗಿ ಬೀಳ್ಳೋದನ್ನು, ಸರ್ರಪರ್ರ ಎಂದು ಕಾರುಗಳು ಬರೋದನ್ನು ಜನ ಇಷ್ಟಪಡುತ್ತಿಲ್ಲ. ಅವರು ಚೇಂಜ್‌ ಕೇಳುತ್ತಿದ್ದಾರೆ. ಅವರೀಗ ರಿಯಾಲಿಟಿಗೆ ಒಗ್ಗಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ರಿಯಾಲಿಟಿಗೆ ಹತ್ತಿರವಿರುವ ಸಿನಿಮಾ ಮಾಡಲು ಪ್ರಯತ್ನಿಸಬೇಕು’ ಎನ್ನುವುದು ಜಗ್ಗೇಶ್‌ ಮಾತು. ಇನ್ನು ಜಗ್ಗೇಶ್‌ ಒಪ್ಪಿಕೊಂಡಿರುವ ನಾಲ್ಕು ಸಿನಿಮಾಗಳ ಕಥೆಗಳು ಭಿನ್ನವಾಗಿವೆಯಂತೆ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಕಥೆಗಳನ್ನೇ ಪ್ರಯತ್ನಿಸುವುದಾಗಿ ಹೇಳುತ್ತಾರೆ ಜಗ್ಗೇಶ್‌. 

ಎಲ್ಲಾ ಓಕೆ, ಜಗ್ಗೇಶ್‌ ಅವರ ಈ ಬದಲಾವಣೆಗೆ ಕಾರಣ ಯಾರು ಎಂದರೆ ಹರಿ ಎನ್ನುತ್ತಾರೆ. ಹರಿ ದೇವರಲ್ಲ, “8 ಎಂಎಂ’ ಚಿತ್ರದ ನಿರ್ದೇಶಕ. ಹರಿ ಆರಂಭದಲ್ಲಿ ಕಥೆ ಹಿಡಿದುಬಂದಾಗ ಜಗ್ಗೇಶ್‌ ಯಾವುದೋ ಡಿಪ್ರಶನ್‌ ಮೂಡ್‌ನ‌ಲ್ಲಿದ್ದರಂತೆ. ಆದರೆ ಕಥೆ ಕೇಳಿ ಖುಷಿಯಾಗಿ, “ಮಾಡೋಣ’ ಎಂದರಂತೆ. 

Advertisement

“ಇಷ್ಟು ವರ್ಷ ಎಲ್ಲಾ ತರಹದ ಪಾತ್ರಗಳನ್ನು ನೋಡಿ, ಮಾಡಿ ಒಂಥರಾ ಏಕತಾನತೆ ಕಾಡುತ್ತಿತ್ತು. ಅದನ್ನ ಬಿಟ್ಟು ಆಚೆ ಬರೋಣ, ಬೇರೆ ಪ್ರಯತ್ನಿಸೋಣ ಎಂಬ ತುಡಿತದಲ್ಲಿದ್ದಾಗ ನನಗೆ ಸಿಕ್ಕಿದ್ದು ಈ ಕಥೆ. ಹೀರೋ ಎಂದರೆ ಹಾಡು, ಫೈಟ್‌, ಡ್ಯಾನ್ಸ್‌ ಎಂಬ ಭಾವವನ್ನು ಹರಿ ನನ್ನಿಂದ ನಿಧಾನವಾಗಿ ಅಳಿಸುತ್ತಾ ಹೋದ. ನನ್ನನ್ನು ಒಬ್ಬ ಪರಿ­ ಪೂರ್ಣ ನಟ ಮಾಡಿದ ಕ್ರೆಡಿಟ್‌ ಆತನಿಗೆ ಸಲ್ಲುತ್ತದೆ. ಇಲ್ಲಿ ಆತನ ವಯಸ್ಸು ಮುಖ್ಯವಲ್ಲ, ಚಿಂತನೆಯಷ್ಟೇ ಮುಖ್ಯ. ಒಳ್ಳೆಯ ವಿಷಯವನ್ನು ತೆರೆದ ಹೃದಯದಿಂದ ಸ್ವೀಕರಿಸುವವನು ನಾನು’ ಎಂದು ನಿರ್ದೇಶಕ ಹರಿ ಬಗ್ಗೆ ಹೇಳುತ್ತಾರೆ ಜಗ್ಗೇಶ್‌. ಇನ್ನು, ಈ ಪಾತ್ರಕ್ಕೆ ಸ್ವಲ್ಪ ನೆಗೆಟಿವ್‌ ಶೇಡ್‌ ಇರುವುದರಿಂದ ಜಗ್ಗೇಶ್‌ ಅವರು ಮಾಡುತ್ತಾರೋ, ಇಲ್ಲವೋ ಎಂಬ ಸಣ್ಣ ಭಯ ಹರಿಗಿತ್ತಂತೆ. ಆದರೆ, ಒಬ್ಬ ಕಲಾವಿದನಾದವ ಎಲ್ಲಾ ತರಹದ ಪಾತ್ರ ಮಾಡಬೇಕು ಎಂಬ ಕಾರಣಕ್ಕೆ ಜಗ್ಗೇಶ್‌ ಖುಷಿಯಿಂದಲೇ ಒಪ್ಪಿಕೊಂಡರಂತೆ. “ನನಗೆ ಅನಂತ್‌ನಾಗ್‌, ಅಮಿತಾಭ್‌ ಬಚ್ಚನ್‌, ರವಿಚಂದ್ರನ್‌ ಸ್ಫೂರ್ತಿ. ಅವರು ಪಾತ್ರವಾಗಿ ಜೀವಿಸುತ್ತಾರೆ. ಕಲಾವಿದ ಪಾತ್ರವಾಗಿ ಜೀವಿಸುವುದನ್ನು ಅಭ್ಯಾಸಿಸಿದಾಗ ಆತನಿಗೆ ಒಳ್ಳೆಯ ಪಾತ್ರಗಳು ಸಿಗುತ್ತವೆ’ ಎಂದು ತಾವು ಕಂಡುಕೊಂಡ ಸತ್ಯದ ಬಗ್ಗೆ ಹೇಳುತ್ತಾರೆ ಜಗ್ಗೇಶ್‌.

8 ಎಂಎಂ ಆಡಿಯೋ ಬಂತು
ಹರಿಕೃಷ್ಣ ನಿರ್ದೇಶನದ “8 ಎಂಎಂ’ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆ­ಯಾಯಿತು. ಜೊತೆಗೆ ಚಿತ್ರದ ಹಾಡುಗಳನ್ನು ಕೂಡಾ ಮಾಧ್ಯಮ ಮುಂದೆ ಪ್ರದರ್ಶಿಸಲಾಯಿತು. ಈ ಚಿತ್ರವನ್ನು ನಾರಾಯಣ್‌ ಬಾಬು, ಇನ್‌ಫ್ಯಾಂಟ್‌ ಪ್ರದೀಪ್‌ ಹಾಗೂ ಸಲೀಮ್‌ ಷಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಟಿಸಿರುವ ವಸಿಷ್ಠ ಸಿಂಹ, ಮಯೂರಿ ತಮ್ಮ ತಮ್ಮ ಅನುಭವ ಹಂಚಿಕೊಂಡು ಖುಷಿಯಾದರು. ವಸಿಷ್ಠ ಇಲ್ಲಿ ಲವರ್‌ಬಾಯ್‌ ಆಗಿ ಕಾಣಿಸಿಕೊಂಡಿದ್ದು, ತುಂಬಾ ವರ್ಷಗಳ ನಂತರ ಈ ಪಾತ್ರಕ್ಕಾಗಿ ಗಡ್ಡ ತೆಗೆದ ಬಗ್ಗೆ ಹೇಳಿಕೊಂಡರೆ, ಮಯೂರಿ ಇಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರಂತೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ವಿ.ಆರ್‌.ವಿನ್ಸೆಂಟ್‌ ಛಾಯಾಗ್ರಹಣವಿದೆ. ಚಿತ್ರದ ಒಂದು ಹಾಡನ್ನು ಜಗ್ಗೇಶ್‌ ಬರೆದಿದ್ದು, ವಸಿಷ್ಠ ಧ್ವನಿಯಾಗಿದ್ದಾರೆ.

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next