ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಈವರೆಗೆ 1,044 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಗುರುವಾರ(ಜೂನ್ 03) ವರದಿಯಾಗಿದ್ದು, ಇದರಲ್ಲಿ 89 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿರುವುದಾಗಿ ನ್ಯೂಸ್ ಏಜೆನ್ಸಿ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ:ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಮದ್ಯಮಾರಾಟದಿಂದ ದಾಖಲೆಯ ಆದಾಯ ಗಳಿಸಿದೆ : ಡಿಕೆಶಿ
92 ಮಂದಿ ಬ್ಲ್ಯಾಕ್ ಫಂಗಸ್ ನಿಂದ ಚೇತರಿಸಿಕೊಂಡಿದ್ದು, 863 ಸಕ್ರಿಯ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಇದ್ದಿರುವುದಾಗಿ ತಿಳಿಸಿದ್ದಾರೆ. ಮ್ಯೂಕ್ರೋಮೈಕೋಸಿಸ್ ಇದೊಂದು ಫಂಗಲ್ ವೈರಸ್ ಆಗಿದ್ದು, ಇದರಿಂದ ಬಾಯಿ, ಮೂಗು ಮತ್ತು ಕಣ್ಣುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ನಂತರ ಇದು ಮೆದುಳಿಗೆ ಹರಡಲಿದೆ ಎಂದು ಜೈನ್ ವಿವರಿಸಿದ್ದಾರೆ.
ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿಯೇ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಳವಾಗಿರುವುದು ಆರೋಗ್ಯ ವ್ಯವಸ್ಥೆಗೆ ಒಂದು ಸವಾಲಿನ ಪರಿಸ್ಥಿತಿಯನ್ನು ತಂದೊಡ್ಡಿರುವುದಾಗಿ ಹೇಳಿದರು. ಆದರೆ ದೇಶಾದ್ಯಂತ ಕೋವಿಡ್ 19 ಸೋಂಕು ಪ್ರಕರಣ ಇಳಿಮುಖವಾಗುತ್ತಿರುವ ಜತೆಗೆ ಬ್ಲ್ಯಾಕ್ ಫಂಗಸ್ ಕೂಡಾ ಇಳಿಕೆಯಾಗಿದೆ ಎಂದರು.
ಮ್ಯೂಕ್ರೋಮೈಕೋಸಿಸ್ ಸಾಮಾನ್ಯವಾಗಿ ಮಣ್ಣು, ಗಾಳಿ, ಮೂಗು ಮತ್ತು ಮನುಷ್ಯನ ಸಿಂಬಳದಲ್ಲೂ ಕಂಡುಬರುತ್ತದೆ ಎಂದು ವರದಿ ಹೇಳಿದೆ. ಈ ಫಂಗಸ್ ಉಸಿರಿನ ಮೂಲಕ ಶ್ವಾಸಕೋಶಕ್ಕೆ ಹೋಗುತ್ತದೆ, ಕೆಲವೊಮ್ಮೆ ಸೋಂಕು ಮೆದುಳಿಗೆ ಹೋಗುವುದನ್ನು ತಡೆಯಲು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕಣ್ಣನ್ನು ತೆಗೆದುಹಾಕಬೇಕಾಗುತ್ತದೆ ಎಂದು ವರದಿ ವಿವರಿಸಿದೆ.