ಉಡುಪಿ: ಮೊದಲ ಸ್ವಾತಂತ್ರೊತ್ಸವದ ಸಂಭ್ರಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಸಂದೇಶ ನೀಡಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇದೀಗ 71ನೇ ಸ್ವಾತಂತ್ರೊತ್ಸವದಲ್ಲಿ ಸಾಕ್ಷಿ ಯಾಗಿದ್ದಾರೆ.
1947ರ ಆ. 14ರ ರಾತ್ರಿಯಿಂದ ಆ. 15ರ ರಾತ್ರಿ ವರೆಗೆ ನಗರದ ವಿವಿಧೆಡೆ ಸ್ವಾತಂತ್ರೊತ್ಸವ ಆಚರಣೆಯಾಗಿತ್ತು. ದೇವಸ್ಥಾನಗಳು, ಮಠಗಳು, ಮನೆಗಳು, ರಸ್ತೆಗಳು ಅಲಂ ಕರಣ ಗೊಂಡಿದ್ದವು. ಆ. 14ರ ರಾತ್ರಿ ಎಂ.ವಿ. ಹೆಗ್ಡೆ ಅವರು ರಚಿಸಿದ “ಸ್ವರಾಜ್ಯ ವಿಜಯ’ ತಾಳ ಮದ್ದಳೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂ. ವಿಠಲ ಕಾಮತ್ (ಎಂ.ವಿ. ಕಾಮತ್ ಅವರ ತಂದೆ) ಅವರ ಅಧ್ಯಕ್ಷತೆ ಯಲ್ಲಿ ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಪ್ರಸ್ತುತ ಪಡಿಸಲಾಯಿತು. ಇದರ ಮರು ಸೃಷ್ಟಿ ಯನ್ನು 70ನೇ ಸ್ವಾತಂತ್ರೊತ್ಸವದಲ್ಲಿ ಕಳೆದ ವರ್ಷ ಪ್ರಸ್ತುತ ಪಡಿಸಲಾಯಿತು.
1919ರಿಂದ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ಸ್ಥಾನವಾಗಿದ್ದ ಉಡುಪಿ ರಥಬೀದಿಯಲ್ಲಿ ಸ್ಥಳೀಯರು ಮತ್ತು ಆಸುಪಾಸಿನವರು ಜಮಾಯಿಸಿದ್ದರು. ಮಧ್ಯರಾತ್ರಿ ಶ್ರೀಕೃಷ್ಣ ಮಠ ಮತ್ತು ದೇವಳಗಳ ನಗಾರಿ, ಗಂಟೆಗಳ ಸದ್ದು ನಿರಂತರವಾಗಿ ಕೇಳಿ ಬಂತು. ಇದಾದ ಬಳಿಕ ನಿರಂತರವಾಗಿ ಕದೊನಿಗಳನ್ನು (ಬೆಡಿ) ಸಿಡಿಸಲಾಯಿತು. ಪರ್ಯಾಯ ಪೀಠಸ್ಥರಾಗಿದ್ದ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿ ಮತ್ತು ಇತರ ಅಷ್ಟಮಠಗಳ ಸ್ವಾಮೀಜಿಯವರು, ಶ್ರೀ ಭಂಡಾರ ಕೇರಿ ಮಠದ ಸ್ವಾಮೀಜಿ, ಸ್ವಾತಂತ್ರ್ಯ ಹೋರಾಟಗಾರರು, ಸತ್ಯಾಗ್ರಹಿಗಳು ರಥಬೀದಿಯಲ್ಲಿ ನಡೆದ ಜನಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜವನ್ನು ಅರಳಿಸಿದರು.
ಆ ಸಭೆಯಲ್ಲಿ ಪಾಲ್ಗೊಂಡ ಶ್ರೀ ಪೇಜಾವರ ಮಠಾಧೀಶರಿಗೆ ಆಗ 16 ವರ್ಷವಾಗಿದ್ದರೆ ಈಗ ಐದನೆಯ ಪರ್ಯಾಯ ಪೀಠಸ್ಥರಾಗಿ 87ರ ಹೊಸ್ತಿಲಿನಲ್ಲಿದ್ದಾರೆ. ಅಂದು ಶ್ರೀಪಾದರು “ಅನೇಕರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಮುಂದಿನ ಪೀಳಿಗೆಯವರು, ಆಡಳಿತಾರೂಢರು ಉಳಿಸಿಕೊಂಡು ದೇಶವನ್ನು ಸದೃಢಗೊಳಿಸಬೇಕು’ ಎಂದು ಕರೆ ನೀಡಿದ್ದರು.
ಆ. 15ರ ಬೆಳಗ್ಗೆ ಶ್ರೀಕೃಷ್ಣ ಮಠದಿಂದ ಶಿಸ್ತುಬದ್ಧ ಪ್ರಭಾತ್‌ಫೇರಿ ಹೊರಟು 1919ರಿಂದ ಸ್ವಾತಂತ್ರ್ಯ ಹೋರಾಟದ ಇನ್ನೊಂದು ಪ್ರಮುಖ ಕೇಂದ್ರವಾದ ಅಜ್ಜರ ಕಾಡು ಗಾಂಧೀ ಮೈದಾನದಲ್ಲಿ ಸಮಾ ಪನ ಗೊಂಡಿತು. (ಗಾಂಧೀಜಿ ಯವರು 1934ರಲ್ಲಿ ಈ ಮೈದಾನಕ್ಕೆ ಬಂದು ಭಾಷಣ ಮಾಡಿದ್ದರು. 1947ರೊಳಗೆ ಈ ಮೈದಾನಕ್ಕೆ ಗಾಂಧೀ ಮೈದಾನವೆಂದು ಹೆಸರು ಬಂದಿತ್ತು). ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ ಪಾಂಗಾಳ ನಾಯಕ್ ಕುಟುಂಬದ ಪಿ. ಮನೋರಮಾ ಬಾೖ ರಾಷ್ಟ್ರಧ್ವಜ ಅರ ಳಿಸಿ ದರು. ಸೇವಾದಲ ಮತ್ತು ಶಾಲಾ ಮಕ್ಕಳು ರಾಷ್ಟ್ರ ಗೀತೆ ಮತ್ತು ದೇಶಭಕ್ತಿ ಗೀತೆ ಗಳನ್ನು ಹಾಡಿ ದರು. ಶಾಲೆಗಳಲ್ಲಿ ಸಿಹಿತಿಂಡಿ ವಿತರಿಸ ಲಾಯಿತು. ಆಗಿನ ಕಾಂಗ್ರೆಸ್ ಅಧ್ಯಕ್ಷ ಬಾಳ್ಕಟ್ಟಬೀಡು ಕೃಷ್ಣಯ್ಯ ಹೆಗ್ಡೆ ಮತ್ತು ತಹಶೀಲ್ದಾರ್ ಸದಾನಂದ ಪೈ ಮೊದಲಾದವರು ಪಾಲ್ಗೊಂಡಿ ದ್ದರು. ಅಂದಿನ “ನವಯುಗ’ ಮತ್ತು “ರಾಷ್ಟ್ರಬಂಧು’ ವಾರ ಪತ್ರಿಕೆ ಗಳು ವರದಿ ಮಾಡಿದ್ದವು.