ಹಾವೇರಿ: ಹಗ್ಗೋ ಮಾರಾಯ.. ಚಾಕುಡಿಕೆಂಡ ಗುದ್ಲೆಪ್ಪ ಹಳ್ಳಿಕೇರಿ ಸರ್ಕಲ್‌ದಾಗ ನಿಂತಕೆಂಡಿದ್ನಿ. ಬಂದರಪಾ ಕುಣಕೊಂತ ಮಂದಿ ಹೇಳ್ತನಿ ನಿಮಗ…, ಚೇ ಚೇ ಚೇ…ಚೇ..ಹೆಂತ ಕುಣತೋಪಾ ಅದು. ಗುಗ್ಗಳ ಕೊಡಾ ಹೊತ್ತಾಗೂ ಇಷ್ಟ ಮಸ್ತ್ ಕುಣಿದುಲ್ಲ ಬಿಡಮತ್. ವೀರಗಾಸಿ ಸಾಂಬಾಳ ಹೊಡಿಯೋ ಸೌಂಡಿಗೆ ಸರ್ಕಲ್ ದಾಗಿನ ಮಂಡಕ್ಕಿ ಚುರಮರಿ ಅಂಗಡಿಯೊಳಗಿನ ಭಾಂಡೆ ಎಲ್ಲಾ ಎತ್ತ ಬೇಕಾದತ್ತ ಹೊಳ್ಯಾಡಿ ಬಿದ್ದು ಹೆಪ್ಪ ಮುರಿದ ಅಡಕಲ ಗಡಿಗಿ ಬಿದ್ದು ಸಪ್ಪಳಾದು ನೋಡ.
ಮೈಲಾರ ಗುಡ್ಡದಿಂದ ಬಂದಿದ್ದ ಪಟಗದ ಅಜ್ಜ ಹಣಿಗೆ ಚಲೋತ್ನಾಗೆ ಭಂಡಾರ ಇಬತ್ತಿ ಹೊಡಕೊಂಡಿದ್ದ. ಚಂದ್ರಕಾಳಿ ಸೀರಿ ಉಟ್ಟ ತನ್ನ ಹೆಂಡ್ತಿನ ಕೈ ಹಿಡಕೊಂಡ ಎಲ್ಲಿಗ ಕರಕೊಂಡ ಹೊಂಟಿದ್ನೋ ಗೊತ್ತಿಲ್ಲ. ಮುದಕಿನೂ ಒಂದಿಷ್ಟ ಶರೀಫ್‌ರ ಹೇಳಿದಾಂಗ ಗದ್ದಲದ ಹೂಲಗೂರ ಸಂತ್ಯಾಗ ನಿಂತಂಗ ನಿಂತಿದ್ಲು. ಅಷ್ಟೊತ್ತಿಗಂದ್ರ ಸಮ್ಮೇಳನಾ ಅಧ್ಯಕ್ಷರ ಮೆರವಣಿಗೆ ರಥಾ ಬಂತನೋಡ್ರಿ.
ಎಪ್ಪಾ…ನೋಡಿದವ್ರಿಗೆ ಸಾವಿರದ ಶರಣು ಮಾಡಬೇಕು ಅನ್ನೋ ಖುಷಿ ಎದ್ಯಾಗ ಉಕ್ಕಿ ಹರಿಯುವಂಗಾತು. ಅಲ್ಲಿದ್ದವ್ರಗೆಲ್ಲಾ. ಏ ಯಾರೋ ಇಂವಾ ಅಂದ್ಲು ಮುದಕಿ. ಅಜ್ಜ ಮೀಸಿ ಕಯ್ನಾಡಸ್ಕೊಂತ, ಏ ಜನಮದ ಜೋಡಿ ಸಿನಿಮಾದಾಗಿನ ಹಾಡ ಬರದಾರಂತ ಇವ್ರು. ಅದಕ್ಕ ಮೆರವಣಿಗಿ ಮಾಡಾತಿರಬೇಕು ಅಂದ.
ಬಾಜು ನಿಂತ ಗುದ್ಲೆಪ್ಪ್ಪ ಹಳ್ಳಿಕೇರಿ ಕಾಲೇಜಿನ ಹುಡಗಿ ಕಿಸ ಕಿಸ ನಕ್ಕು. ಬರೇ ಅದೊಂದ ಸಿನಿಮಾ ಹಾಡಲ್ಲೋ ಯೆಜ್ಜಾ. ನಂಜುಂಡಿ ಕಲ್ಯಾಣದ ಒಳಗೆ ಸೇರಿದರೆ ಗುಂಡು ಹಾಡನು ಸೇರಿ ಅವ್ರ ನೂರಾರು ಸಿನಿಮಾ ಹಾಡ ಬರದಾರ ಅದಕ್ಕ ಹಾವೇರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷಗಿರಿ ಕೊಟ್ಟಾರ ಅವ್ರಗಿ ಅಂದ್ಲು. ಅಜ್ಜನು ಥಟಕ್ ಹಾಕಿದ್ನ ಕಾಣತೈತಿ. ಒಳಗೆ ಸೇರಿದರೆ ಗುಂಡು ಶಬ್ದ ಕೇಳದವನ ಗಪ್ ಚುಪ್ ಆದ್ನ. ಮೆರವಣಿಗಿ ಮುಂದ ಹೋಗಾಕತ್ತಿತ್ತು ಮುದಕಗ ಭೂಮಿ ತಾಯಾನೆ ನೀ ಇಷ್ಟಾ ಕಣೆ ಹಾಡು ನೆನಪಾಗಿರಬೇಕು.
ಮೀಸ್ಯಾಗಿಂದನ ಒಂದ ನಗಿ ನಕ್ಕು ಸೊಂಟದ ಮ್ಯಾಲ ಕೈ ಇಟ್ಟು ನಿಂತಾ. ಮೆರವಣಿಗಿ ಖದರ್ ನೋಡಿ ಅಬಾಬಾ…ಅಲಾ..ಲಾ..ಅಂದಾ. ಸಮ್ಮೇಳನ ಜಾಗಕ್ಕ ಬರತಿದ್ದಂಗ ಗೌಡರನ್ನ ಸ್ವಾಗತ ಮಾಡಿದವ್ರು ಕಂಬಳಿ ಹಾಸಿಕೆಂಡ ಕುಂತಿದ್ದ ಕುರುಬರ ರಾಯಪ್ಪ. ಅವನ ಪ್ರಶ್ನೆ ಏನಪಾ ಅಂದ್ರ ಅಲ್ವೋ ಈ ಗೌಡ್ರು ಭಾರಿ ಮಸ್ತ ಮಸ್ತ ಸಿನಿಮಾ ಹಾಡ ಬರದಾರಂತ. ಸಮ್ಮೇಳನದಾಗ ಏನಾರ ಹಾಡು ಸಿನಿಮಾ ತೋರಸ್ತಾರನ ಅನ್ನೊದು. ಬಾಜುಕ ನಿಂತಿದ್ದ ಹಾವೇರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಲಿಂಗಯ್ಯ ಹಿರೇಮಠರು, ಎಪ್ಪಾ ಯಜ್ಜಾ ಸಿನಿಮಾ ತೋರಸು ಟೆಂಟ್ ಕಂಡಂಗ ಕಾಣಾತೈತೆನ ನಿನಗಿದು. ಅಲ್ಲಪಾ ಇದು ಕನ್ನಡದ ಜಾತ್ರಿ. ವರ್ಷಾ ನೀ ಹೆಂಗ ಗುಡ್ಡದ ಜಾತ್ರಿ ಮಾಡತಿಯಲ್ಲಾ ಹಂಗ ಕನ್ನಡ ಜಾತ್ರಿ ಇದು ಅಂತಾ ಸಮ್ಮೇಳನ ಸಮರ್ಥಿಸಿ ಕೊಳ್ಳದರಾಗ ಸಾಕಾಗಿ ಹೋಯಿತು. ಅಂದು ಗೌಡ್ರು ಉತ್ತರ ಕರ್ನಾಟಕದ ಖಡಕ್ ಮೆಣಸಿನಕಾಯಿ ಮಂದಿಯಂತಾ ಮಾತ ಕೇಳಿಸಿಕೊಳ್ಳದ್ದ ಚಲೋ ಆತು.
ಅಂತು ಇಂತು ಸಮ್ಮೇಳನ ವೇದಿಕಿ ಹತ್ತಿದ್ರು. ಆಹಾ ಏನರ ಖದರ್ ಅಂದ್ರಿ ಗೌಡರದು. ಮೊದ್ಲ ದೊಡ್ಡರಂಗ ಇರೋ ಗೌಡ್ರು.ಒಲುಮೆ ಸಿರಿ ಕಂಡಂಗಾತು. ಬಂದು ವೇದಿಕಿ ಮ್ಯಾಲ ಆಸೀನರಾಗತ್ತಿಂಗನ ಕನ್ನದ ಮನಸ್ಸುಗಳ ಚಪ್ಪಾಳಿ ಸದ್ದು ಮುಗಲ ಮುಟ್ಟತು. ರೂಪ ಎದೆಗೆ ನಾಟಿದಾಂಗಿತ್ತು. ಗೌಡ್ರ ಊರು ಯಾರು ಕೇಳಲಿಲ್ಲ.ಸೇರಿದ ಎಲ್ಲಾರೂ ನಮ್ಮೂರ ಮಂದಾರ ಹೂವೆ… ಅನ್ನೋಥರಾ ಗೌಡ್ರನ ಅವಚಗೊಂಡರು. ಗೌಡ್ರು ಕೇಳಿಸದೇ ಕಲ್ಲುಕಲ್ಲಿನ ಕನ್ನಡ ನುಡಿ
ಅಂತಾ ಅಷ್ಟ ಬರದಿದ್ರು. ಆದ್ರ ಸಾಹಿತ್ಯ ಸಮ್ಮೇಳನ ನಡೆದ ಹಾವೇರಿ ಕರಿ ಮಣ್ಣಿನ ಕಣ ಕಣದಲ್ಲೂ ಕನ್ನಡ ನುಡಿ ಕೇಳ್ತ ನೋಡ್ರಿಪಾ. ಅಂತೂ ಕನ್ನಡದ ತೇರು ಏರಿದ ರಂಗೇಗೌಡ್ರು ಹಾವೇರ್ಯಾಗೆ ನಗು ನಗುತಾ ನಲಿದರು.
●
ಡಾ|ಬಸವರಾಜ್ ಹೊಂಗಲ್