Advertisement
ವೃತ್ತಿ ಶಿಕ್ಷಣಕ್ಕೆ ಮಂಗಳೂರು ಹೆಸರಾಗಿದ್ದು, ಇಲ್ಲಿರುವ ದೇಶ ವಿದೇಶಗಳ ವಿದ್ಯಾರ್ಥಿಗಳು ಮತ್ತು ಇತರ ಯುವಜನರು ಡ್ರಗ್ಸ್‌ನ ಪ್ರಮುಖ ಗ್ರಾಹಕರು. ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್‌ಗಳಾದ ಎಂಡಿಎಂಎ, ಕೊಕೇನ್, ಚರಸ್, ಹಶೀಶ್ ಇತ್ಯಾದಿ ವಿವಿಧ ಭಾಗಗಳಿಂದ ಸರಬರಾಜಾಗುತ್ತಿವೆ. 2019ರಿಂದ ಸಿಂಥೆಟಿಕ್ ಡ್ರಗ್‌ಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಪೊಲೀಸರ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಎಂಡಿಎಂಎ ಮಾದಕ ವಸ್ತು ಪೌಡರ್, ಮಾತ್ರೆಯ ರೂಪದಲ್ಲಿ ರವಾನೆ ಆಗುತ್ತಿದೆ.
2019ರಲ್ಲಿ 12 ತಿಂಗಳ ಅವಧಿಯಲ್ಲಿ 31,21,380 ರೂ. ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿದ್ದರೆ 2020ರಲ್ಲಿ ಅದರ ಪ್ರಮಾಣ ಹೆಚ್ಚಳವಾಗಿದ್ದು, ಕೇವಲ 5 ತಿಂಗಳಲ್ಲಿ (ಫೆಬ್ರವರಿ, ಮಾರ್ಚ್, ಜೂನ್, ಜುಲೈ, ಆಗಸ್ಟ್) 40,30,150 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ. ಮಂಗಳೂರು ಗಲಭೆಯ ಕಾರಣ ಈ ವರ್ಷದ ಜನವರಿಯಲ್ಲಿ ಮತ್ತು ಲಾಕ್‌ಡೌನ್ ಇದ್ದ ಕಾರಣ ಎಪ್ರಿಲ್- ಮೇ ತಿಂಗಳಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. 2019ನೇ ವರ್ಷದಲ್ಲಿ ಗಾಂಜಾ ಹೊರತು ಪಡಿಸಿ, ಎಂಡಿಎಂಎ ಮಾತ್ರೆಗಳು ಮತ್ತು ಪೌಡರ್, ಚರಸ್, ಕೊಕೇನ್, ಬ್ಲೂ ಮತ್ತು ಪಿಂಕ್ ಮಾತ್ರೆಗಳು, ಎಲ್‌ಎಸ್‌ಡಿ ಪೇಪರ್ ಅಧಿಕ ಪ್ರಮಾಣದಲ್ಲಿ ಪತ್ತೆಯಾಗಿತ್ತು. ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಿರಂತರ ವಾಗಿದ್ದರೂ ಈ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸಾಧ್ಯವಾಗಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ಒಮ್ಮೆ ಬಂಧಿತರಾದವರೇ ಮತ್ತೆ ಮತ್ತೆ ಬಂಧಿತರಾಗಿದ್ದಾರೆ.