Advertisement
1926ರಲ್ಲಿ ಸ್ಥಾಪಿತವಾದ ಈ ಶಾಲೆಯು 1991ರಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ಬಂದು ತಲುಪಿತ್ತು. ಅಂದು ಸುಮಾರು 1 ವರ್ಷದ ಕಾಲ ಬೋಳಕೋಡಿಯ ಮೃತ್ಯುಂಜಯರುದ್ರ ಸೋಮನಾಥೇಶ್ವರ ದೇವಸ್ಥಾನದ ಅಂಗಣದಲ್ಲಿ ಮೇಲ್ಛಾವಣಿ ಇಲ್ಲದೆ ಟರ್ಪಾಲು ಹೊದೆಸಿಕೊಂಡು ತರಗತಿಗಳು ನಡೆದವು. 1992ರ ಎಪ್ರಿಲ್ 11ರಂದು ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರನ್ನು ಶಿಕ್ಷಕಿಯರ ತಂಡವು ಭೇಟಿ ಮಾಡಿ ಶಾಲೆಯ ಉಳಿವಿಗಾಗಿ ಪ್ರೋತ್ಸಾಹಿಸುವಂತೆ ಮನವಿ ಮಾಡಿತು. ಅಂದು ವಿನಯ ಹೆಗ್ಡೆ ಅವರು ಈ ಶಾಲೆಯನ್ನು ಮುಂದುವರಿಸಲು ಬೇಕಾದ ಎಲ್ಲ ಬೆಂಬಲವನ್ನು ನಿಟ್ಟೆ ಸಂಸ್ಥೆ ನೀಡಲಿದೆ ಎಂಬ ಭರವಸೆ ನೀಡಿದ್ದರು.
ಅವರ ಭರವಸೆ ಶಾಲೆಯ ಅಭಿವೃದ್ಧಿಗೆ ಮಹತ್ವದ ತಿರುವು ನೀಡಿತು. ಬೋಳಕೋಡಿ ಗ್ರಾಮದ ಕೆ.ಎಂ. ಶೆಟ್ಟಿ ಅವರು ಶಾಲಾ ಕಟ್ಟಡಕ್ಕೆ ಬೇಕಾದ ಸ್ಥಳವನ್ನು ದಾನಮಾಡಿದರು. 1995ರಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿ ಶಾಲಾ ಚಟುವಟಿಕೆಗಳು ಪ್ರಾರಂಭಗೊಂಡವು. ಶಾಲಾ ಸಂಚಾಲಕ ವಿಶಾಲ್ ಹೆಗ್ಡೆ ಅವರ ಮುಂದಾಳತ್ವದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಎಂ. ವಿಮಲಾ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಮುಖ್ಯೋಪಾಧ್ಯಾಯ ಎ. ಆರ್. ಲಕ್ಕುಂಡ ಅವರ ನೇತೃತ್ವದಲ್ಲಿ ಒಟ್ಟು 7 ಮಂದಿ ಶಿಕ್ಷಕ/ಶಿಕ್ಷಕಿಯರು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Related Articles
Advertisement
ಹಲವು ವರ್ಷಗಳಿಂದ ನಿಟ್ಟೆ ವಿದ್ಯಾ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕವನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಅನುದಾನಿತ ಶಾಲೆಯಾಗಿರುವ ಕಾರಣ ಇಲ್ಲಿ ಸರಕಾರದ ಬಿಸಿಯೂಟ, ಹಾಲು ವಿತರಣೆ ಮುಂತಾದ ಪೌಷ್ಟಿಕ ಆಹಾರಗಳನ್ನೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮಾನಸಿಕ, ಶಾರೀರಿಕ, ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಗುಣಮಟ್ಟದ ಶಿಕ್ಷಣಗ್ರಾಮೀಣ ಪ್ರದೇಶದಲ್ಲಿ ಸುಸಂಸ್ಕೃತ ಹಾಗೂ ಉತ್ತಮ ಗುಣಮಟ್ಟದ ಕನ್ನಡ ಮಾಧ್ಯಮ ಶಿಕ್ಷಣ ನೀಡಬಲ್ಲ ಶಾಲೆಗಳ ಅಗತ್ಯವಿದೆ. ಗುಣಮಟ್ಟದ ಶಿಕ್ಷಣ ಪಡೆಯುವ ಇಚ್ಛೆಯಲ್ಲಿರುವ ವಿದ್ಯಾರ್ಥಿಗಳು ಈ ಶಾಲೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸಂತಸದ ವಿಚಾರ. ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ವಿವಿಧ ದೇಶಗಳಲ್ಲಿ ಉತ್ತಮ ಹುದ್ದೆಗಳಲ್ಲಿ ಉದ್ಯೋಗದಲ್ಲಿರುವುದು ಶಾಲೆಯ ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.