Advertisement

ಹುಡಾದಿಂದ 843 ನಿವೇಶನ ಇ-ಹರಾಜು

08:56 AM Jun 13, 2020 | Suhan S |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ)ವು ಅವಳಿ ನಗರದ ವಿವಿಧೆಡೆ ರಚಿಸಿರುವ ವಿನ್ಯಾಸಗಳಲ್ಲಿ ಬಾಕಿ ಉಳಿದ 843 ನಿವೇಶನಗಳನ್ನು ಇ-ಹರಾಜು ಮೂಲಕ ವಿತರಿಸಲಾಗುವುದು. ಈಗಾಗಲೇ 126 ಮೂಲೆ ನಿವೇಶನಗಳಿಗೆ ಪತ್ರಿಕಾ ಪ್ರಕಟಣೆ ನೀಡಲಾಗಿದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಇದುವರೆಗೆ ಅವಳಿ ನಗರದಲ್ಲಿ ಒಟ್ಟು 34 ವಿನ್ಯಾಸ(ಲೇಔಟ್‌) ಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ 29 ವಿನ್ಯಾಸಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಈ ಎಲ್ಲ ವಿನ್ಯಾಸಗಳಲ್ಲಿ ಒಟ್ಟು 14,863 ನಿವೇಶನ ರಚಿಸಲಾಗಿದ್ದು, ಅದರಲ್ಲಿ 14,020 ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಉಳಿದ 843 ನಿವೇಶನಗಳನ್ನು ಸರಕಾರದ ನಿರ್ದೇಶನದಂತೆ ಇ-ಹರಾಜು ಮೂಲಕ ವಿತರಿಸಲಾಗುವುದು. 126 ಮೂಲೆ ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದರು.

ಲಕ್ಕಮನಹಳ್ಳಿ ಗ್ರಾಮದ ವಿನ್ಯಾಸದಲ್ಲಿ ಒಟ್ಟು 62 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 328 ಅರ್ಜಿ ಸ್ವೀಕೃತವಾಗಿವೆ. ಅದೇ ರೀತಿ ತಡಸಿನಕೊಪ್ಪ ಗ್ರಾಮದಲ್ಲಿ ರೈತರ ಸಹಭಾಗಿತ್ವದಲ್ಲಿ 50ಎಕರೆ ವಸತಿ ವಿನ್ಯಾಸ ರಚಿಸಿದ್ದು, ಅದರಲ್ಲಿ ಪ್ರಾಧಿಕಾರದ ವಶದಲ್ಲಿದ್ದ 275 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 3178 ಅರ್ಜಿಗಳು ಸ್ವೀಕೃತವಾಗಿವೆ. ಈ ನಿವೇಶನಗಳನ್ನು ಹಂಚಿಕೆ ಸಮಿತಿ ರಚನೆಯಾದ ನಂತರ ಕೂಡಲೇ ಹಂಚಲಾಗುವುದು. ಪ್ರಾಧಿಕಾರದ ಹಾಗೂ ಖಾಸಗಿ ವಿನ್ಯಾಸಗಳು ಸೇರಿ ಒಟ್ಟು 393 ನಾಗರಿಕ ಸೌಲಭ್ಯಗಳಿಗೆ ಮೀಸಲಾದ ನಿವೇಶನಗಳಿದ್ದು, ಅವುಗಳಲ್ಲಿ 359 ನಿವೇಶನಗಳನ್ನು ವಿತರಿಸಿದ್ದು, ಉಳಿದ 34ಗಳನ್ನು ವಿತರಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಾಧಿಕಾರದಿಂದ ಗುಂಪು ವಸತಿ ಯೋಜನೆಯಡಿ 22.95 ಕೋಟಿ ರೂ. ಅನುದಾನದಲ್ಲಿ ಗಾಂಧಿನಗರ, ಲಕಮನಹಳ್ಳಿ, ತಡಸಿನಕೊಪ್ಪದಲ್ಲಿ 160 ಮನೆಗಳನ್ನು ನಿರ್ಮಿಸುವ ಯೋಜನೆ ಮಂಜೂರಾತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರಕಿದ ನಂತರ ಟೆಂಡರ್‌ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಾಧಿಕಾರದಿಂದ ಸರಕಾರದ ಆದೇಶದಂತೆ 50:50 ಅನುಪಾತದಲ್ಲಿ ರೈತರ ಸಹಭಾಗಿತ್ವದಲ್ಲಿ ವಿನ್ಯಾಸ ರಚಿಸಲು ಭೂಮಿ ಪಡೆಯುವ ಸಲುವಾಗಿ ಈಗಾಗಲೇ ಉಣಕಲ್ಲ, ಇಟಿಗಟ್ಟಿ, ತಡಸಿನಕೊಪ್ಪ ಗ್ರಾಮದ ರೈತರೊಂದಿಗೆ ಚರ್ಚಿಸಿದ್ದು, 100 ಎಕರೆ ಕೊಡಲು ಸಿದ್ಧರಾಗಿದ್ದಾರೆ. ಅವರಿಗೆ ಭೂಮಿಯ ದಾಖಲೆ ಹಾಜರುಪಡಿಸಲು ತಿಳಿಸಲಾಗಿದೆ. ನಂತರ ಅದನ್ನು ಪರಿಶೀಲಿಸಿ ಸರಕಾರಕ್ಕೆ ಯೋಜನೆಯ ಮಂಜೂರಾತಿಗೆ ಸಲ್ಲಿಸಲಾಗುವುದು. ಅನುಮತಿ ದೊರೆತ ನಂತರ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಪ್ರಾಧಿಕಾರದಿಂದ ಅವಳಿ ನಗರದ ವಿವಿಧೆಡೆ ಒಟ್ಟು 1000 ಎಕರೆಯಲ್ಲಿ ಹೊಸ ವಿನ್ಯಾಸಗಳನ್ನು ರಚಿಸಲು ಯೋಜಿಸಲಾಗಿದೆ. ದೊಡ್ಡನಾಯಕನಕೊಪ್ಪದಲ್ಲಿ 10 ಎಕರೆಯಲ್ಲಿ ವಿನ್ಯಾಸ ಅಭಿವೃದ್ಧಿ ಪಡಿಸಲು ಟೆಂಡರ್‌ ಕರೆಯಲಾಗಿದೆ. ಶೀಘ್ರವೇ ಇದರ ಭೂಮಿಪೂಜೆ ಮಾಡಲಾಗುವುದು ಎಂದರು.

Advertisement

ಕೆಲಗೇರಿ, ಕೋಳಿಕೇರಿ ಹಾಗೂ ಸಾಧನಕೇರಿ ಕೆರೆಗಳ ಅಭಿವೃದ್ಧಿಗೆ ಪ್ರಾಧಿಕಾರ 8 ಕೋಟಿ ರೂ. ಬಿಡುಗಡೆ ಮಾಡಿದೆ. ನಗರದಲ್ಲಿನ ಕೆರೆಗಳ ಅಭಿವೃದ್ಧಿ ಕುರಿತು ವಿಸ್ತೃತ ಯೋಜನೆ ರೂಪಿಸಲಾಗಿದೆ. ಧಾರವಾಡದ ಸಪ್ತಾಪುರದಲ್ಲಿ 98.50ಲಕ್ಷ ರೂ.ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು, ಶೀಘ್ರವೇ ಉದ್ಘಾಟಿಸಿ, ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು. ದೊಡ್ಡ ನಾಯಕನಕೊಪ್ಪ ಗ್ರಾಮದಲ್ಲಿ 96ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದ್ದು, ಅದು ಪ್ರಗತಿಯಲ್ಲಿದೆ ಎಂದರು.

ಹುಡಾ ಆಯುಕ್ತ ನಿಂಗಪ್ಪ ಎಚ್‌. ಕುಮ್ಮಣ್ಣನವರ, ಕಾರ್ಯ ನಿರ್ವಾಹಕ ಅಧಿಕಾರಿ ಎಂ. ರಾಜಶೇಖರ, ಪ್ರಾಧಿಕಾರದ ಜಂಟಿ ನಿರ್ದೇಶಕ ವಿವೇಕ ಕಾರೇಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next