ಮುಂಬೈ: ದೇಶದಲ್ಲಿರುವ ಮುಸ್ಲಿಂ ಸಮುದಾಯದವರ ಪೈಕಿ ಶೇ.84 ಮಂದಿ ಬಹುಪತ್ನಿತ್ವವನ್ನು ವಿರೋಧಿಸುತ್ತಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ (ಬಿಎಂಎಂಎ) ಎಂಬ ಸಂಘಟನೆ ದೇಶಾದ್ಯಂತ ನಡೆಸಿದ ಅಧ್ಯಯನದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ತಮ್ಮ ಪತಿ ಮತ್ತೂಬ್ಬರನ್ನು ಮದುವೆಯಾಗುವ ಮೂಲಕ ಘನತೆ, ವರ್ಚಸ್ಸು ನಷ್ಟವಾಗಿದೆ ಎಂದು ಬಹುತೇಕ ಮಹಿಳೆಯರು ಹೇಳಿಕೊಂಡಿದ್ದಾರೆ. ಹೆಚ್ಚಿನ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಇರುವುದರಿಂದ ಈ ಬಗ್ಗೆ ಕಠಿಣವಾಗಿ ಅಭಿಪ್ರಾಯ ವ್ಯಕ್ತಪಡಿಸಲೂ ಅಸಾಧ್ಯವಾಗಿದೆ. ಅಂತಿಮವಾಗಿ ಈ ಪರಿಸ್ಥಿತಿ ಮಾನಸಿಕ ಆಘಾತಕ್ಕೂ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಒಟ್ಟು 300 ಮಂದಿ ಮಹಿಳೆಯರನ್ನು ಸಂದರ್ಶನ ನಡೆಸಿ, ಬಿಎಂಎಂಎ ಅಭಿಪ್ರಾಯ ಸಂಗ್ರಹ ಮಾಡಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಪತಿ ಎರಡನೇ ವಿವಾಹವಾದ ಬಗ್ಗೆ ಸ್ನೇಹಿತರಿಂದ ಅಥವಾ ನೆರೆಮನೆಯವರಿಂದ ತಿಳಿದು ಬಂದಿದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪತಿಯ ಜತೆ ಇರಲು ಅವರು ನಿರ್ಧರಿಸಿದ್ದಾಗಿಯೂ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ.
“ಸ್ಟೇಟಸ್ ಆಫ್ ವುಮನ್ ಇನ್ ಪಾಲಿಗಮಸ್ ಮ್ಯಾರೇಜಸ್ ಆ್ಯಂಡ್ ನೀಡ್ ಫಾರ್ ಲೀಗಲ್ ಪ್ರೊಟೆಕ್ಷನ್’ (Status of Women in Polygamous Marriages and Need for Legal Protection) ಎಂಬ ಶೀರ್ಷಿಕೆಯಲ್ಲಿ ವರದಿ ಸಿದ್ಧಪಡಿಸಲಾಗಿದೆ. ನೂರ್‌ಜಹಾನ್ ಸಫಿಯಾ ಮತ್ತು ಝಕಿಯಾ ಸೋಮನ್ ಎಂಬವರು ಈ ಅಧ್ಯಯನ ನಡೆಸಿದ್ದಾರೆ.