ಬೆಂಗಳೂರು: ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಈ ವರ್ಷದಲ್ಲಿ(7 ತಿಂಗಳ ಅವಧಿಯಲ್ಲಿ) 8362ಕ್ಕೂ ಅಧಿಕ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿದೆ. ಜತೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ 267 ದೂರುಗಳನ್ನು ದಾಖಲಿಸಿದೆ. ಜೂನ್ ತಿಂಗಳ ಆರಂಭದಿಂದ ಈವರೆಗೂ 1.03 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಜಾಹೀರಾತು ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಧಿಕೃತವಾಗಿ ಜಾಹೀರಾತುಗಳನ್ನು ಅಳವಡಿಸುವುದರಿಂದ ನಾಗರಿಕರಿಗೆ ಸಾಕಷ್ಟು ಅನಾನುಕೂಲವಾಗಲಿದೆ. ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವುದರಿಂದ ಪ್ರಾಣಿಹಾನಿಯಾಗುವ ಸಂಭವವೂ ಹೆಚ್ಚಿರುತ್ತದೆ. ಈ ಸಂಬಂಧ ಅನಧಿಕೃತವಾಗಿ ಜಾಹೀರಾತು ಅಳವಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರಮುಖ ರಸ್ತೆಗಳ ಬದಿ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳ ಫ್ಲೆಕ್ಸ್‌ಗಳನ್ನು ಹೆಚ್ಚು ಅಳವಡಿಸಲಾಗುತ್ತಿದೆ. ಯಾವುದೇ ಶುಭಾಶಯಗಳ ಕುರಿತ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸದಂತೆ ಪಾಲಿಕೆಯು ನಾಗರಿಕರಲ್ಲಿ ಮನವಿ ಮಾಡಿದೆ. ನಗರದ ರಸ್ತೆ ಬದಿ, ಪಾದಚಾರಿ ಮಾರ್ಗ, ಜಂಕ್ಷನ್‌ಗಳು, ಮೇಲುಸೇತುವೆಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅನಧಿಕೃತ ಜಾಹೀರಾತುಗಳ ತೆರವು ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಸಹ ಪಾಲಿಕೆಯ ಜೊತೆ ಕೈ ಜೋಡಿಸಿದ್ದು ಸಹಕಾರ ನೀಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ನಾಗರಿಕರು ಪಾಲಿಕೆ ಸಹಾಯವಾಣಿ ಸಂಖ್ಯೆಯಾದ 1533 ಅಥವಾ ಜಾಹೀರಾತು ವಿಭಾಗದ ವ್ಯಾಟ್ಸ್‌ಆ್ಯಪ್ ಸಂಖ್ಯೆ 9480683939 ಗೆ ಛಾಯಾಚಿತ್ರ ಅಥವಾ ವಿಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಪಾಲಿಕೆ ವತಿಯಿಂದ ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.