Advertisement

83 ಗ್ರಾಮ, 43 ಸ್ಥಳಗಳಿಗೆ ಜಲಕಂಟಕ

01:16 PM Aug 07, 2020 | Suhan S |

ಧಾರವಾಡ: ಅತಿಯಾದ ಮಳೆಯಾದರೆ ಬೆಣ್ಣೆಹಳ್ಳ, ತುಪ್ಪರಿಹಳ್ಳ, ದೊಡ್ಡಹಳ್ಳ, ಹುಲಿಕೇರಿ, ಮುಗದಕೆರೆ, ಉಣಕಲ್ಲ ಕೆರೆ, ಕೆಲಗೇರಿ ಕೆರೆ ಸೇರಿದಂತೆ ವಿವಿಧ ಜಲಮೂಲಗಳ ಹತ್ತಿರವಿರುವ ಸುಮಾರು 83 ಗ್ರಾಮ ಹಾಗೂ 43 ಸ್ಥಳಗಳಲ್ಲಿ ತೊಂದರೆ ಆಗುವ ಸಾಧ್ಯತೆ ಇದೆ ಎಂದು ನಿತೇಶ ಪಾಟೀಲ ಹೇಳಿದರು.

Advertisement

ನಗರದ ಡಿಸಿ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲೆಯ ಅತಿವೃಷ್ಟಿ ಪರಿಹಾರ ಕಾರ್ಯಗಳ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ತುರ್ತು ಸಭೆ ಜರುಗಿಸಿ ಅವರು ಮಾತನಾಡಿದರು. ಈ 83 ಹಳ್ಳಿಗಳಲ್ಲಿ ಡಂಗೂರ ಸಾರಿ ಜನರನ್ನು ಎಚ್ಚರಿಸಬೇಕು. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಗ್ರಾಮಸ್ಥರೊಂದಿಗೆ ಸಭೆ ಜರುಗಿಸಿ ಚಿಕಿತ್ಸೆ ಸೇರಿದಂತೆ ಜಿಲ್ಲಾಡಳಿತ ಸಿದ್ಧಗೊಳಿಸಿರುವ ಸೌಲಭ್ಯ ಕುರಿತು ಮಾಹಿತಿ ನೀಡಬೇಕು. ಪ್ರತಿ ಗ್ರಾಮದಲ್ಲಿ ಈಜು, ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗುವ 10 ಜನರಿರುವ ಯುವ ಸ್ವಯಂ ಸೇವಕರ ತಂಡ ರಚಿಸಬೇಕು. ಅಧಿಕಾರಿಗಳು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿದ್ದಾಗ ಅವರೊಂದಿಗೆ ಪರಿಹಾರ ಕಾರ್ಯದಲ್ಲಿ ತೊಡಗಬೇಕು. ಆಯಾ ತಾಲೂಕಿನ ತಹಶೀಲ್ದಾರ್‌ ಮತ್ತು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಈ ತಂಡಗಳ ಮೇಲುಸ್ತುವಾರಿ ಮಾಡಬೇಕೆಂದು ಸೂಚಿಸಿದರು.

ಕಂದಾಯ, ಕೃಷಿ, ಪಶುಸಂಗೋಪನೆ, ಪಂಚಾಯತ್‌ ರಾಜ್‌, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳು, ಎನ್‌ಡಿಆರ್‌ ಎಫ್‌ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅತಿವೃಷ್ಟಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.

ಪ್ರತಿ ತಾಲೂಕಿಗೆ ಜಿಲ್ಲಾಮಟ್ಟದ ಓರ್ವ ಅಧಿಕಾರಿಯನ್ನು ಅತಿವೃಷ್ಟಿ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕಾಗಿ ನೋಡೆಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅಗತ್ಯವಿದ್ದಲ್ಲಿ ಪರಿಹಾರ ಕೇಂದ್ರ ಆರಂಭಿಸಲು ಕಟ್ಟಡಗಳನ್ನು ಗುರುತಿಸಿ ಅಲ್ಲಿ ಕುಡಿಯುವ ನೀರು, ಶೌಚಾಲಯ, ಊಟ, ವಸತಿ ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ್‌ ಮಾತನಾಡಿ, ಸಾರ್ವಜನಿಕರ ಸಹಭಾಗಿತ್ವದಿಂದ ನೆರೆ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಗ್ನಿಶಾಮಕ, ಎನ್‌ ಡಿಆರ್‌ಎಫ್‌, ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿ ಅಗತ್ಯವಿದ್ದಲ್ಲಿ ತಕ್ಷಣ ಸ್ಪಂದಿಸಬೇಕು ಎಂದರು.

Advertisement

ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 13, ಧಾರವಾಡ ತಾಲೂಕಿನಲ್ಲಿ 08, ನವಲಗುಂದ ತಾಲ್ಲೂಕಿನ 26 ಹಳ್ಳಿಗಳು ಪ್ರವಾಹಕ್ಕೀಡಾಗಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶಗಳಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಯಾ ತಹಸೀಲ್ದಾರರು ಸಭೆಗೆ ವಿವರಿಸಿದರು.

ಎಸಿ ಮಹ್ಮದ್‌ ಜುಬೇರ, ಉಪ ಪೊಲೀಸ್‌ ಆಯುಕ್ತ ಆರ್‌.ಬಿ. ಬಸರಗಿ, ಎಸ್‌.ಪಿ. ಕಚೇರಿ ಡಿವೈಎಸ್‌ಪಿ ಜೆ.ಸಿ. ಶಿವಾನಂದ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಅಧಿಕಾರಿ ವಿನಾಯಕ, ಎನ್‌ ಡಿಆರ್‌ಎಫ್‌ ತಂಡದ ಇನ್ಸ್‌ಪೆಕ್ಟರ್‌ ಅಬೆನ್‌, ವಿವಿಧ ತಾಲೂಕಿನ ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ನಿರಂತರ ಮಳೆಯಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 37 ಮನೆಗಳು ಭಾಗಶಃ ಹಾನಿಯಾಗಿದೆ. ನವಲಗುಂದ ತಾಲೂಕಿನ ಅನೇಕ ಕಡೆ ಬೆಳೆ ಹಾನಿಯಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ಮಾಡಿ ಹಾನಿಯ ವರದಿ ನೀಡಬೇಕು. -ನಿತೇಶ ಪಾಟೀಲ, ಡಿಸಿ, ಧಾರವಾಡ

ಅವಳಿ ನಗರದಲ್ಲಿ 14 ಕೆರೆಗಳನ್ನು ಪರಿಶೀಲಿಸಲಾಗಿದ್ದು, ಸುಮಾರು 43 ಸ್ಥಳಗಳು ತೊಂದರೆಗೀಡಾಗುವ ಸಂಭವ ಇದೆ. ಅದರಲ್ಲಿ 18 ಪ್ರದೇಶಗಳಲ್ಲಿ ಹೆಚ್ಚು ಬಾಧಿತವಾಗುವ ಸಾಧ್ಯತೆ ಇದೆ. ತಗ್ಗು ಪ್ರದೇಶದ ಜನರ ಸ್ಥಳಾಂತರಕ್ಕೆ 17 ಕಲ್ಯಾಣ ಮಂಟಪಗಳನ್ನು ಗುರುತಿಸಲಾಗಿದ್ದು, ಅವುಗಳ ಕೀಲಿಗಳು ಈಗಾಗಲೇ ಪಾಲಿಕೆ ಸಿಬ್ಬಂದಿ ಬಳಿ ಇವೆ. – ಡಾ| ಸುರೇಶ ಇಟ್ನಾಳ, ಆಯುಕ್ತರು, ಹು-ಧಾ ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next