Advertisement

8.16ಕೋಟಿ ಜಿಎಸ್‌ಟಿ ವಂಚಿಸಿದ್ದ ಉದ್ಯಮಿ ಸೆರೆ

12:17 PM Sep 07, 2018 | |

ಬೆಂಗಳೂರು: ಸರಕು ಮತ್ತು ಸೇವೆಗಳನ್ನು ಪೂರೈಸದೆ ನಕಲಿ ಇನ್‌ವಾಯ್ಸ ಸಲ್ಲಿಸಿ 8.16 ಕೋಟಿ ರೂ. ಜಿಎಸ್‌ಟಿ ವಂಚಿಸಿದ್ದ ಉದ್ಯಮಿಯನ್ನು ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆ ಬಂಧಿಸಿದ್ದು, ಆ ಮೂಲಕ ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಜಿಎಸ್‌ಟಿ ವಂಚನೆ ಸಂಬಂಧ ಮೊದಲ ಬಂಧನವಾದಂತಾಗಿದೆ.

Advertisement

ನ್ಯೂ ಬಸವೇಶ್ವರ ಲೇಔಟ್‌ ಬಳಿಯ ಗಾಣಿಗರಹಳ್ಳಿಯಲ್ಲಿನ ಎಆರ್‌ಎಸ್‌ ಎಂಟರ್‌ಪ್ರೈಸಸ್‌ ಮಾಲೀಕ ಹಮೀದ್‌ ರಿಜ್ವಾನ್‌ ಪಾರ್ಥಿಪಡಿ ಇಸ್ಮಾಯಿಲ್‌ ಎಂಬುವರನ್ನು ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗವು ಬುಧವಾರ ರಾತ್ರಿ ಬಂಧಿಸಿದ್ದು, ಸೆ.20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೇ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಮತ್ತೂಬ್ಬ ಉದ್ಯಮಿ ಜಿತೇಂದ್ರ ಕಾಂತಿಲಾಲ್‌ ಗಾಂಧಿ ಎಂಬುವರನ್ನು ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. 

ಇಲಾಖೆಯ ಬೆಂಗಳೂರು ದಕ್ಷಿಣ ವಲಯದ ಜಾರಿ ವಿಭಾಗದ ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತರು ಆ.27ರಂದು ಗುಜರಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಎಆರ್‌ಎಸ್‌ ಎಂಟರ್‌ಪ್ರೈಸಸ್‌ಗೆ ಪರಿಶೀಲನಾ ಭೇಟಿ ನೀಡಿದಾಗ ಉದ್ಯಮಿ ಯಾವುದೇ ಸರಕು ಮತ್ತು ಸೇವೆಯನ್ನು ಪೂರೈಸದಿದ್ದರೂ ನಕಲಿ ಇನ್‌ವಾಯ್ಸಗಳನ್ನು ಸಲ್ಲಿಸಿ ಜಿಎಸ್‌ಟಿ ಪಾವತಿಸದೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಹಮೀದ್‌ ಸಲ್ಲಿಸಿರುವ ಇನ್‌ವೈಯ್ಸಗಳನ್ನೇ ಬಳಸಿ ಉಳಿದ ಖರೀದಿದಾರರು ಸರಕುಗಳನ್ನು ಖರೀದಿಸದೆ ಇನ್‌ವಾಯ್ಸ ಆಧರಿಸಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಲು ನೆರವಾಗಿರುವುದು ಬಯಲಾಗಿದೆ. ಇಲಾಖೆಯ ಡಾಟಾ ಅನಾಲಿಟಿಕ್ಸ್‌ ಸಾಫ್ಟ್ವೇರ್‌ (ಜಿಎಸ್‌ಟಿಪ್ರೊ)ನಡಿ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸುವಾಗ ಈ ಅಕ್ರಮ ಬಯಲಾಗಿದೆ.

ಜಿಎಸ್‌ಟಿ ಜಾರಿಯಾದ 2017ರ ಜುಲೈನಿಂದ 2018ರ ಜುಲೈವರೆಗೆ ಉದ್ಯಮಿ ಸಲ್ಲಿಸಿದ ಜಿಎಸ್‌ಟಿಆರ್‌- 1 ಹಾಗೂ ಜಿಎಸ್‌ಟಿಆರ್‌- 3ಬಿ ವಿವರದಲ್ಲಿ 45.94 ಕೋಟಿ ರೂ. ಮೊತ್ತದ ಸರಕು- ಸೇವೆ ಖರೀದಿಗೆ ಇನ್‌ವಾಯ್ಸ ವಿವರವಿದೆ. ಆದರೆ ವಾಸ್ತವದಲ್ಲಿ ಸರಕು ಪೂರೈಸದೆ ಇರುವುದರಿಂದ ಸುಮಾರು 8.16 ಕೋಟಿ ರೂ. ವಂಚಿಸಿರುವುದು ದೃಢಪಟ್ಟಿದೆ.

Advertisement

ಸರಕು ಖರೀದಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರೂ ಉದ್ಯಮಿ ಸಲ್ಲಿಸದ ಕಾರಣ ಅವರು ಯಾವುದೇ ಸರಕು- ಸೇವೆ ಖರೀದಿಸದಿರುವುದು ಖಾತರಿಯಾಗಿದೆ. ಜತೆಗೆ ಅವರು ಅದೇ ಇನ್‌ವಾಯ್ಸಗಳನ್ನು ಇತರೆ ಖರೀದಿಗೆದಾರರಿಗೂ ರವಾನಿಸಿ ಅವರು ಇದೇ ರೀತಿಯ ತೆರಿಗೆ ವಂಚಿಸಲು ನೆರವಾಗಿರುವುದು ಕಂಡುಬಂದಿದೆ.

ಈ ಬಗ್ಗೆ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ವಲಯದ ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ (ಜಾರಿ) ನಿತೇಶ್‌ ಪಾಟೀಲ್‌, ಸರಕು ಮತ್ತು ಸೇವೆಗಳನ್ನು ಪೂರೈಸದೆ ನಕಲಿ ಇನ್‌ವಾಯ್ಸಗಳನ್ನು ಸಲ್ಲಿಸಿ ಜಿಎಸ್‌ಟಿ ವಂಚನೆಯಲ್ಲಿ ತೊಡಗಿದ್ದ ಉದ್ಯಮಿ ಹಮೀದ್‌ ರಿಜ್ವಾನ್‌ ಪಾರ್ಥಿಪಡಿ ಇಸ್ಮಾಯಿಲ್‌ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.

ತಾವು ತೆರಿಗೆ ವಂಚಿಸುವುದು ಮಾತ್ರವಲ್ಲದೇ ಅದೇ ಇನ್‌ವಾಯ್ಸಗಳನ್ನು ಇತರೆ ಖರೀದಿದಾರರಿಗೂ ರವಾನಿಸಿ  ಅವರು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಲು ಪ್ರೇರಣೆ ನೀಡಿದ್ದರು. ಅದರಂತೆ 19.52 ಕೋಟಿ ರೂ. ಮೊತ್ತದ ಸರಕು ಮತ್ತು ಸೇವೆ ಖರೀದಿಸಿರುವುದಾಗಿ ಇನ್‌ವಾಯ್ಸ ಸಲ್ಲಿಸಿ 3.45 ಕೋಟಿ ರೂ. ತೆರಿಗೆ ವಂಚಿಸಿದ್ದ ಗಾಂಧಿ ಐರನ್‌ ಆ್ಯಂಡ್‌ ಸ್ಟೀಲ್‌ ಕಂಪನಿಯ ಜಿತೇಂದ್ರ ಕಾಂತಿಲಾಲ್‌ ಗಾಂಧಿ ಎಂಬುವರನ್ನು ಗುರುವಾರ ಬಂಧಿಸಲಾಗಿದೆ. ತೆರಿಗೆ ವಂಚನೆ ದಂಧೆಯ ಹಿಂದೆ ದೊಡ್ಡ ಜಾಲವಿರುವ ಶಂಕೆಯಿದ್ದು, ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ವಾಣಿಜ್ಯ ತೆರಿಗೆಗಳ ಇಲಾಖೆ ಬೆಂಗಳೂರು ದಕ್ಷಿಣ ವಲಯ ಜಾರಿ ವಿಭಾಗದ ಕಾರ್ಯಾಚರಣೆ ವಿವರ
* 2018ರ ಜುಲೈ- ಆಗಸ್ಟ್‌ನಲ್ಲಿ ಕೈಗೊಂಡ ತಪಾಸಣೆ 510
* ಬಯಲಾದ ಗೌಪ್ಯ ವಹಿವಾಟಿನ ಮೊತ್ತ 560 ಕೋಟಿ ರೂ.
* ಪರಿಶೀಲನೆ/ ತಪಾಸಣೆ ಮೂಲಕ ಸಂಗ್ರಹವಾದ ತೆರಿಗೆ ಮೊತ್ತ 171 ಕೋಟಿ ರೂ.
* ಕಳೆದ ಜನವರಿಯಿಂದ ಆಗಸ್ಟ್‌ವರೆಗೆ ರಸ್ತೆಯಲ್ಲಿ ತಪಾಸಣೆಗೊಳಪಡಿಸಿದ ಸರಕು ಸಾಗಣೆ ವಾಹನಗಳ ಸಂಖ್ಯೆ 57,281
* ಇದೇ ಅವಧಿಯಲ್ಲಿ ತಪಾಸಣೆಗೊಳಪಟ್ಟ ಇ-ವೇ ಬಿಲ್‌ ಸಂಖ್ಯೆ 81,743
* ಕಳೆದ ಎಂಟು ತಿಂಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 692
* ಈ ಅವಧಿಯಲ್ಲಿ ರಸ್ತೆ ತಪಾಸಣೆ ವೇಳೆ ಸಂಗ್ರಹಿಸಿದ ದಂಡ ಮೊತ್ತ 9.25 ಕೋಟಿ ರೂ.
* ಪರೀಕ್ಷಾರ್ಥ ಖರೀದಿ ಪ್ರಕ್ರಿಯೆ ನಡೆಸಿದ ಸಂಖ್ಯೆ 217
* ಪರೀಕ್ಷಾರ್ಥ ಖರೀದಿ ವೇಳೆ ದಂಡ ವಿಧಿಸಲಾದ ಡೀಲರ್‌ಗಳ ಸಂಖ್ಯೆ 50

Advertisement

Udayavani is now on Telegram. Click here to join our channel and stay updated with the latest news.

Next