ಬೆಂಗಳೂರು: ರಾಜ್ಯದಲ್ಲಿರುವ 47 ಸಾರ್ವಜನಿಕ ಉದ್ದಿಮೆಗಳು 8,124.12 ಕೋಟಿ ರೂ. ನಷ್ಟ ಭರಿಸಿವೆ. ವಿಧಾನಸಭೆಯಲ್ಲಿ ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಉದ್ಯಮಗಳ ಮೇಲಿನ ಮಹಾಲೆಕ್ಕಪರಿಶೋಧಕರ ವರದಿ ಮಂಡಿಸಿದ್ದು, 47 ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿರುವುದು ಉಲ್ಲೇಖಿಸಲಾಗಿದೆ.
124 ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ 13 ಉದ್ದಿಮೆಗಳು ಕಾರ್ಯಸ್ಥಗಿತಗೊಂಡಿದ್ದು, 47 ನಷ್ಟದಲ್ಲಿದ್ದರೆ 42 ಉದ್ದಿಮೆಗಳು 2,986.47 ಕೋಟಿ ಲಾಭಗಳಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ನಾಲ್ಕೂ ಸಂಸ್ಥೆಗಳು 2015ರಿಂದ 2021ರ ವರೆಗೆ 4,689.09 ಕೋಟಿ ನಷ್ಟ ಅನುಭವಿಸಿವೆ ಎಂದು ವರದಿ ತಿಳಿಸಿದೆ.
ಮಂಡ್ಯದ ಮೈಶುಗರ್ ಕಾರ್ಖಾನೆ 2005ರಲ್ಲೇ ರೋಗಗ್ರಸ್ತ ಎಂದು ಘೋಷಿಸಿದ ಅನಂತರವೂ 526.51 ಕೋಟಿ ರೂ. ಹೂಡಿಕೆ ಮಾಡಿದ್ದು ಹಾಗೂ ಖಾಸಗಿಯವರಿಗೆ ಗುತ್ತಿಗೆ ನೀಡುವ ನಿರ್ಣಯ ಫಲಪ್ರದವಾಗಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಾರುಕಟ್ಟೆ ಸ್ಥಿತಿಗತಿ ಮತ್ತು ಮಾರಾಟಗಳ ಸಾಧ್ಯತೆ ಸಾಧಕ-ಬಾಧಕ ತಿಳಿಯದೇ ಎಂಎಸ್‌ಐಎಲ್ ಮರಳು ಆಮದು ಮಾಡಿಕೊಂಡ ಪರಿಣಾಮ 21.14 ಕೋಟಿ ರೂ.ನಷ್ಟು ಮರಳು ದಾಸ್ತಾನು ನಾಲ್ಕು ವರ್ಷ ಇದ್ದ ಪರಿಣಾಮ 10.57 ಕೋಟಿ ರೂ. ಹೂಡಿಕೆ ನಿರುಪಯುಕ್ತವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಲ್ಲಿ ಗುತ್ತಿಗೆದಾರರಿಗೆ ಅನರ್ಹ ಲಾಭ ಮಾಡಿಕೊಡಲಾಗಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರಕಾರದ ಆರ್ಥಿಕ ನೆರವಿನಿಂದ ಬಿಎಂಟಿಸಿ ಪರಿಸರ -ಸ್ನೇಹಿ ಬಸ್ ಖರೀದಿಸಲು ಟೆಂಡರ್ ಆಹ್ವಾನಿಸಿದ ಬಳಿಕ ಹಿಂದೆ ಸರಿದ ಪರಿಣಾಮ 170.31 ಕೋಟಿ ರೂ.ನಷ್ಟು ಕೇಂದ್ರದ ಅನುದಾನ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಿಡಿಎ ಕಣಿಮಿಣಿಕೆಯಲ್ಲಿ ವಸತಿ ಯೋಜನೆಯನ್ನು ಅಸಮರ್ಪಕವಾಗಿ ಕಾರ್ಯಗತಗೊಳಿಸಿದ್ದು, 451.53 ಕೋಟಿ ರೂ. ವರಮಾನ ಪಡೆದುಕೊಂಡಿಲ್ಲ, 27.24 ಕೋಟಿ ರೂ. ವ್ಯರ್ಥ ವೆಚ್ಚವಾಗಿದೆ. ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಜನರಿಗೆ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದ ಉದ್ದೇಶವೂ ಈಡೇರಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.