ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೆ ಜನ್ಮದಿನೋತ್ಸವ ಪ್ರಯುಕ್ತ ಇಂದು ಬೆಳಗ್ಗೆ ಶ್ರೀಚಕ್ರ ಪೂಜೆ, ದತ್ತಾತ್ರೆಯ ಹೋಮ ನೆರವೇರಿಸಲಾಯಿತು.
ನಂತರ ಸ್ವಾಮೀಜಿಯವರನ್ನು ಜಾನಪದ ಕಲಾಮೇಳದೊಂದಿಗೆ ಮೆರವಣಿಗೆಯಲ್ಲಿ ನಾದಮಂಟಪಕ್ಕೆ ಕರೆತಂದುದು ವಿಶೇಷವಾಗಿತ್ತು.
ಇದಾದನಂತರ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ನಾದನಿಧಿ ಪ್ರಶಸ್ತಿಯನ್ನು ಖ್ಯಾತ ಪಿಯಾನೋ ವಾದಕ ನವದೆಹಲಿಯ ವಿದ್ವಾನ್ ಬ್ರಿಯಾನ್ ಸೈಲಸ್, ಕೊಳಲು ವಾದಕ ಚನ್ನೈನ ವಿದ್ವಾನ್ ಬಿ.ವಿ.ಬಾಲಸಾಯಿ ಹಾಗೂ ಸಸ್ಯ ಬಂಧು ಪ್ರಶಸ್ತಿಯನ್ನು ಬೋನ್ಸಾಯ್ ನಲ್ಲಿ ಪ್ರಾವೀಣ್ಯತೆ ಪಡೆದಿರುವ ಕಾಕಿನಾಡದ ಡಾ. ಚಂದ್ರು ವೀರರಾಜು ಚೌದರಿ, ಮುಂಬೈನವರಾದ ರಾಜೀವ್ ವೈದ್ಯ ಹಾಗೂ ಸುಧೀರ್ ಜಾದವ್, ತೋಟಗಾರಿಕೆಯಲ್ಲಿ ನುರಿತವರಾದ ಮೈಸೂರಿನ ಕೊಂಡೂರು ಕೃಷ್ಣರಾಜು ಮತ್ತು ವಿಶಾಖಪಟ್ಟಣದ ಮಂತೆನ ಆಂಜನೇಯ ರಾಜು ಅವರುಗಳಿಗೆ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಎಡನೀರು ರಾಮಕೃಷ್ಣ ಮಠಾಧೀಶರಾದ ಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕೊಂಡಾಡಿದರು.ಗಣಪತಿ ಶ್ರೀಗಳು ಸಂಗೀತದ ಮೂಲಕ ಜನರ ಮನಕ್ಲೇಷ ಹಾಗೂ ಅನಾರೋಗ್ಯ ಗುಣಪಡಿಸುವ ವಿಶೇಷತೆಯನ್ನು ಅಳವಡಿಸಿ ಕೊಂಡಿರುವುದು ವಿಶೇಷ ಎಂದು ಬಣ್ಣಿಸಿದರು.
Related Articles
ಒಂದು ವೇಳೆ ಗಣಪತಿ ಶ್ರೀಗಳು ಹಿಮಾಲಯಕ್ಕೆ ಹೋಗಿಬಿಟ್ಟಿದ್ದರೆ ಸಮಾಜಕ್ಕೆ ಬಹಳ ನಷ್ಟವಾಗಿಬಿಡುತ್ತಿತ್ತು,ಅವರು ಇಲ್ಲೇ ನೆಲೆಸಿ ಸಮಾಜದ ಉದ್ದಾರಕ್ಕೆ ಶ್ರಮಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು. ಗಣಪತಿ ಶ್ರೀಗಳಿಗೆ 80ನೆ ವರ್ಷದ ಜನ್ಮದಿನದ ಶುಭಕಾಮನೆಗಳನ್ನು ಅವರು ಸಲ್ಲಿಸಿದರು.
ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಜಗತ್ತಿನೆಲ್ಲೆಡೆ ಭಾರತೀಯ ಸಂಸ್ಕೃತಿ ಗಟ್ಟಿಯಾಗಿ ನೆಲೆಗೊಳ್ಳುವಂತೆ ಮಾಡಿದ್ದಾರೆ ಎಂದು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ಶ್ರೀಗಳು ಇಂದಿನ ದಿನಮಾನದ ಶ್ರೇಷ್ಠ ಪರಂಪರೆಯಾದ ಆಧ್ಯಾತ್ಮಿಕ ರಾಯಭಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಬಣ್ಣಿಸಿದರು.ಶ್ರೀಗಳು ವಿಶ್ವದೆಲ್ಲೆಡೆ ಆಧ್ಯಾತ್ಮಿಕ ಎಂಬ ಅಮೃತವನ್ನು ಸಿಂಚನ ಮಾಡುತ್ತಿದ್ದಾರೆ ಎಂದರು.
ವೇದ,ಕಲೆ,ಸಂಸ್ಕೃತಿ, ಸಂಗೀತ, ಆಧ್ಯಾತ್ಮ ಒಟ್ಟೊಟ್ಟಿಗೆ ಮೇಳೈಸಿದ ಪುಣ್ಯ ಕ್ಷೇತ್ರ ಗಣಪತಿ ಸಚ್ಚಿದಾನಂದ ಆಶ್ರಮ ಎಂದು ಸುತ್ತೂರು ಶ್ರೀ ಗಳು ವರ್ಣಿಸಿದರು. ಜಗತ್ತನ ತುಂಬಾ ಆಶ್ರಮಗಳನ್ನು ಶ್ರೀ ಗಳು ಸ್ಥಾಪಿಸಿದ್ದಾರೆ,ಈ ಮೂಲಕ ಆಧ್ಯಾತ್ಮಿಕ ನಮ್ಮ ಸಂಸ್ಕೃತಿಯನ್ನು ಪಸರಿಸಿದ್ದಾರೆ ,ಶ್ರೀಗಳು ಭಕ್ತರಲ್ಲಿ ಅಂತಃಶಕ್ತಿ ಸದಾ ಜಾಗೃತವಾಗಿರುವಂತೆ ಮಾಡಿದ್ದಾರೆ,ವರ್ಷದ 365 ದಿನಗಳ ಕಾಲವೂ ಸೂರ್ಯ-ಚಂದ್ರನ ಬೆಳಕು ಈ ಆಶ್ರಮದ ಮೇಲೆ ಬೀಳುತ್ತಿರುತ್ತದೆ ಎಂದು ತಿಳಿಸಿದರು.
ಬಾಲಸ್ವಾಮಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಹಿರಿಯ ಶ್ರೀಗಳಹಾದಯಲ್ಲಿ ಸಾಗುತ್ತಿದ್ದಾರೆ ಗಣಪತಿ ಶ್ರೀಗಳ ಜನ್ಮದಿನದ ಪ್ರಯುಕ್ತ ವಶ್ವಶಾಂತಿಗಾಗಿ ಪ್ರಾರ್ಥಿಸಿ ಮೇಕೆದಾಟಿನಿಂದ ಪಾದಯಾತ್ರೆ ಮಾಡುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.
ರಾಮಕೃಷ್ಣ ಮಠದ ಪೂಜ್ಯ ಶ್ರೀ ಮುಕ್ತಿದಾನಂದ ತೀರ್ಥ ಸ್ವಾಮೀಜಿ ಮಾತನಾಡಿ,ಭಾರತ ದೇಶ ಸಂತರ ನಾಡು.ಯತಿವರೇಣ್ಯರಾದ ಗಣಪತಿ ಶ್ರೀಗಳು ಆಧ್ಯಾತ್ಮಿಕತೆಯನ್ನು ಎಲ್ಲೆಡೆ ಪಸರಿಸುತ್ತಾ ಸನಾತನ ಧರ್ಮದ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ನುಡಿದರು.
ಹರಿಹರ ಪಂಚಮಸಾಲಿ ಮಠದ ಶ್ವಾಸಗುರು ಖ್ಯಾತಿಯ ಪೂಜ್ಯ ಶ್ರೀ ವಚನಾನಂದ ಸ್ವಾಮೀಜಿಯವರು ಈ ವೇಳೆ ಸಭಿಕರಿಗೆ ದ್ಯಾನವನ್ನು ಮಾಡಿಸಿದುದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಅವರು ಗಣಪತಿ ಶ್ರೀಗಳು ಶ್ರೀ ದತ್ತನ ಸ್ವರೂಪ ಎಂದು ಬಣ್ಣಿಸಿದರು.
ಶ್ರೀಗಳು ಟ್ರಿನಿಡಿ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಹಿಮಾಲಯದಿಂದ ಗಂಗೆ ಹರಿಯುತ್ತಿದ್ದಾಳೆ ಎಂಬುದನ್ನು ತೋರಿಸಿಕೊಟ್ಟ ಮಹಾತ್ಮರು ಎಂದು ಶ್ವಾಸಗುರು ನುಡಿದರು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮೂವರು ಶ್ರೀಗಳಿಗೆ ವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗಣಪತಿ ಸ್ವಾಮೀಜಿಯವರು ಭಾಗವತದ ಆಡಿಯೋ ಆಲ್ಬಂ, ಬೋನ್ಸಾಯ್ ಆಲ್ಬಂ ಬಿಡುಗಡೆ ಮಾಡಿದರು.