ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ರಸ್ತೆ ಗುಂಡಿಗಳಿದ್ದರೂ, ಉಪಮುಖ್ಯಮಂತ್ರಿಗಳು ನಗರದಲ್ಲಿ ಕೇವಲ 940 ಗುಂಡಿಗಳಿವೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಜುಲೈ 18ರಂದು ಅಧಿಕಾರಿಗಳು ನೀಡಿದ ಅಂಕಿ-ಅಂಶಗಳನ್ನು ಆಧರಿಸಿ 14,299 ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನು 940 ಗುಂಡಿಗಳು ಮಾತ್ರ ಉಳಿದಿವೆ ಎಂದಿದ್ದಾರೆ. ಆದರೆ, ನಗರದ ಪ್ರಮುಖ ರಸ್ತೆಗಳಲ್ಲಿಯೇ 8000ಕ್ಕೂ ಹೆಚ್ಚು ಗುಂಡಿಗಳಿವೆ ಎಂದು ದಾಖಲೆಗಳನ್ನು ಬಿಡುಗಡೆಗೊಳಿಸಿದರು.
ಉಪಮುಖ್ಯಮಂತ್ರಿಗಳು ಅಂಕಿ-ಅಂಶಗಳನ್ನು ನೀಡಿದ ನಂತರ ತಾವೇ ಖುದ್ದಾಗಿ 27ವಿಧಾನಸಭಾ ಕ್ಷೇತ್ರಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದಾಗ 8 ಸಾವಿರಕ್ಕೂ ಹೆಚ್ಚು ಗುಂಡಿಗಳಿರುವುದು ಪತ್ತೆಯಾಗಿದೆ. ಇನ್ನು ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆಯ ಕ್ಷೇತ್ರಗಳಲ್ಲಿಯೇ ಸಾವಿರಕ್ಕೂ ಹೆಚ್ಚು ಗುಂಡಿಗಳು ಕಾಣುತ್ತವೆ. ಇನ್ನುಳಿದ 11 ಸಾವಿರ ಕಿ.ಮೀ. ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆ ಎಂದು ಊಹೆ ಮಾಡುವುದು ಕಷ್ಟ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2016-17 ಮತ್ತು 2017-18ನೇ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 757 ಕಿ.ಮೀ. ರಸ್ತೆ ಅಭಿವೃದ್ಧಿಗೆ 1,400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ರಸ್ತೆಗುಂಡಿ ಮುಚ್ಚಲು 16.88 ಕೋಟಿ ರೂ. ಹಾಗೂ ರಸ್ತೆ ಅಭಿವೃದ್ಧಿಗಾಗಿ 1,222 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಬಿಡುಗಡೆಯಾದರೂ, ಕಳಪೆ ಕಾಮಗಾರಿಯಿಂದ ಗುಂಡಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಹೀಗಾಗಿ 757 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಕಳಪೆ ಕಾಮಗಾರಿ ನಡೆಸಿದರೂ ಬಿಲ್ ಪಾವತಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.