ಚಿತ್ತಾಪುರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶೇ.80ರಷ್ಟು ಲಿಂಗಾಯತರು ಕಾಂಗ್ರೆಸ್ ಪರ ಇದ್ದೇವೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಹೇಳಿದರು. ಪಟ್ಟಣದಲ್ಲಿ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಯ ಕೆಲ ಲಿಂಗಾಯತ ಸಮುದಾಯದ ಮುಖಂಡರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದ ಲಿಂಗಾಯತರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದರು. ಬಿಜೆಪಿಯಲ್ಲಿ ಕೇವಲ 20 ರಷ್ಟು ಲಿಂಗಾಯತ ಮತದಾರಿದ್ದರೆ, ಕಾಂಗ್ರೆಸ್‌ನಲ್ಲಿ ಶೇ.80ರಷ್ಟು ಲಿಂಗಾಯಿತ ಮತದಾರರು ಇದ್ದೇವೆ ಎಂದು ಹೇಳಿದರು.
ಕ್ಷೇತ್ರದ ಸಚಿವರು ಲಿಂಗಾಯತ ಸಮುದಾಯವನ್ನು ಗೌರವಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿ ಕಾರ ಒದಗಿಸಿ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಬೇಕಾದ ಎಲ್ಲ ರೀತಿಯ ಮೂಲಭೂತ ಸೌಲಭ್ಯ ನೀಡಿ ಜನರ ಮನಸ್ಸು ಗೆದ್ದಿದ್ದಾರೆ.
ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಶೇ.80 ರಷ್ಟು ಮತದಾರರು ಮತ ನೀಡಲಿದ್ದಾರೆ ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಮುಖಂಡ ಶಾಂತಪ್ಪ ಚಾಳಿಕಾರ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯ 8 ಜಿಪಂ, ತಾಪಂ, ಗ್ರಾಪಂ, ಚಿತ್ತಾಪುರ ಪುರಸಭೆ, ವಾಡಿ ಪುರಸಭೆಯ ಲಿಂಗಾಯತರು ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಹೇಳಿದರು.
ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಎಪಿಎಂಸಿ ಅಧ್ಯಕ್ಷ ಬಸವರಾಜ ಸಜ್ಜನ್ ಮುಖಂಡರಾದ ರಾಜಶೇಖರ ತಿಮ್ಮನಾಕ್, ಶಿವಕುಮಾರ ಸುಲ್ತಾನಪುರ, ನಾಗರಾಜ ಕಡಬೂರ, ಶರಣಗೌಡ ಪಾಟೀಲ, ವಿರೂಪಾಕ್ಷ ಗಡ್ಡೇದ್, ರುದ್ರಗೌಡ ಇಂಗಳಗಿ, ಶರಣಗೌಡ ಭಾಗೋಡಿ, ರಾಜಶೇಖರ ದಂಡೋತಿ ಹಾಗೂ ಮತ್ತಿತರರು ಇದ್ದರು.