Advertisement

ಅನುದಾನದ ಶೇ.80ರಷ್ಟು ಹಣ ಭ್ರಷ್ಟರ ಹೊಟ್ಟೆಗೆ

11:48 AM Aug 06, 2017 | Team Udayavani |

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸುವ ಯೋಜನೆಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ.20ರಷ್ಟು ಮಾತ್ರ ಅರ್ಹರಿಗೆ ತಲುಪುತ್ತಿದ್ದು, ಶೇ.80ರಷ್ಟು ಭಾಗ ಭ್ರಷ್ಟಾಚಾರಕ್ಕೆ ಆಹಾರವಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹೇಳಿದರು.

Advertisement

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ “ಆಡಳಿತ ಸುಧಾರಿಸಿ, ದೇಶ ಉಳಿಸಿ’ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, “ಬಜೆಟ್‌ನಲ್ಲಿ ಘೋಷಿತ ಯೋಜನೆಗಳಿಗೆ ಸರ್ಕಾರ ಬಿಡುಗಡೆ ಮಾಡುವ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಶೇ.80ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಇರುವ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನವಾಗದಿರುವುದರಿಂದ ಲೂಟಿ ನಿಯಂತ್ರಣ ಕಷ್ಟವಾಗಿದೆ ಎಂದು ಹೇಳಿದರು.

ಬೋಫೋರ್ಸ್‌, 2ಜಿ ಹಗರಣ, ಕಾಮನ್‌ವೆಲ್ತ್‌, ಕಲ್ಲಿದ್ದಲು ಹಗರಣಗಳ ಮೂಲಕ ದೇಶದ ಸಂಪತ್ತನ್ನು ಲೂಟಿ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಕುಗ್ಗುತ್ತಿದೆ. ಸದೃಢ ಸಮಾಜ ನಿರ್ಮಾಣಕ್ಕೆ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಟಿ.ಆರ್‌.ರಘುನಂದನ್‌, ರಾಜ್ಯದಲ್ಲಿ ಪಾರದರ್ಶಕ ಕಾಯ್ದೆ ಜಾರಿಯಲ್ಲಿದ್ದು, ಟೆಂಡರ್‌ ಪ್ರಕ್ರಿಯೆಗಷ್ಟೇ ಅನ್ವಯವಾಗುತ್ತದೆ. ಹೀಗಾಗಿ ಟೆಂಡರ್‌ ಪ್ರಕ್ರಿಯೆಗೆ ಮೊದಲು ಹಾಗೂ ನಂತರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಾಮಗಾರಿ, ಯೋಜನೆ ಅನುಷ್ಠಾನದ ಎಲ್ಲ ಹಂತದಲ್ಲಿ ಕಾಯ್ದೆ ಅನ್ವಯವಾಗುವುದಿಲ್ಲ. ಈ ವ್ಯವಸ್ಥೆ ಬರಬೇಕು ಎಂದು ಹೇಳಿದರು.

ವಿಧಾನಸಭೆ ಮಾಜಿ ಸ್ಪೀಕರ್‌ ಕೃಷ್ಣ, ಇಂದು ಮನುಷ್ಯನಿಗೆ ಭಯವೆಂಬುದೇ ಇಲ್ಲದಂತಾಗಿದೆ. ಹಿಂದಿನ ಕಾಲದಲ್ಲಿ ಜನರು ಅವಿದ್ಯಾವಂತರಾಗಿದ್ದರೂ ದೇವರು, ಸಮಾಜಕ್ಕೆ ಹೆದರುತ್ತಿದ್ದರು. ತಪ್ಪು ಕೆಲಸ ಮಾಡಿದರೆ ಸಮಾಜದಿಂದ ಬಹಿಷ್ಕಾರಕ್ಕೆ ಗುರಿಯಾಗುವ ಆತಂಕವಿತ್ತು. ಆದರೆ ಇಂದಿನ ಜನಾಂಗ ವಿದ್ಯಾವಂತರಾಗಿದ್ದರೂ ಮಾನವೀಯ ಮೌಲ್ಯಗಳನ್ನು ಮರೆಯುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದರು.

Advertisement

ನಿವೃತ್ತ ಐಪಿಎಸ್‌ ಅಧಿಕಾರಿ ಶ್ರೀಕುಮಾರ್‌, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next