ಚೆನ್ನೈ/ಮುಂಬಯಿ: ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಕೈತುಂಬಾ ವೇತನ ಇರುವ ಉದ್ಯೋಗಾವಕಾಶ ಲಭಿಸಿದೆ. ಗಮನಾರ್ಹ ಅಂಶವೆಂದರೆ ದೇಶಿಯ ಕಂಪನಿಗಳೇ ಅವರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ. ಕಳೆದ ವರ್ಷ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಕನಿಷ್ಠ ವೇತನ 62 ಲಕ್ಷ ರೂ. ಆಗಿತ್ತು. ಹಾಲಿ ವರ್ಷ ಅದು ವಾರ್ಷಿಕ 80 ಲಕ್ಷ ರೂ. ಆಗಿದೆ.
ಐಐಟಿ ಬಾಂಬೆಯಿಂದ ಆಪ್ಟಿವೆರ್ ಸಂಸ್ಥೆ ಏಳು ಮಂದಿಯನ್ನು ನೇಮಕ ಮಾಡಿಕೊಂಡಿದೆ. ಟ್ರೇಡಿಂಗ್, ಸಾಫ್ಟ್ ವೇರ್ ಮತ್ತು ಕ್ವಾಂಟ್ ರಿಸರ್ಚ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರನ್ನು ಆಯ್ಕೆ ಮಾಡಿದೆ. ಅದು ವಾರ್ಷಿಕ ವೇತನ 1.5 ಕೋಟಿ ರೂ. ವರೆಗೆ ಆಫರ್ ಮಾಡಿದೆ.
ಚೆನ್ನೈನಲ್ಲಿರುವ ಐಐಟಿ ಮದ್ರಾಸ್‌ನಿಂದ 122 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇಸ್ರೋ, ಮೈಕ್ರೋಸಾಫ್ಟ್ ಮತ್ತು ಟೆಕ್ಸಸ್ ಇನ್‌ಸ್ಟ್ರೆಮೆಂಟ್ ಕ್ಯಾಂಪಸ್ ನೇಮಕಕ್ಕಾಗಿ ಆಗಮಿಸಿದ್ದ ಪ್ರಮುಖ ಕಂಪನಿಗಳು. ಮೈಕ್ರೋ ಸಾಫ್ಟ್ 19, ಟೆಕ್ಸಸ್ ಇನ್‌ಸ್ಟ್ರೆಮೆಂಟ್ 12, ಬಜಾಜ್ ಅಟೋ ಮತ್ತು ಇಸ್ರೋ ಕಂಪನಿಗಳು ತಲಾ ಹತ್ತು ವಿದ್ಯಾರ್ಥಿಗಳಿಗೆ ಕೆಲಸದ ಆಫರ್ ನೀಡಿವೆ. ಈ ಮೂಲಕ ಕೊರೊನಾದಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ನೇಮಕ ಆಗುತ್ತಿಲ್ಲ ವೆಂದು ಉಂಟಾಗಿರುವ ಮಿಥ್ಯೆಯನ್ನು ಸುಳ್ಳು ಮಾಡಿದೆ. ಐಐಟಿ ಕಾನ್ಪುರದಲ್ಲಿ 226, ಐಐಟಿ ಖರಗ್ಪುರದಲ್ಲಿ 425 ಇಂಟರ್ನ್ಶಿಪ್ ಅವಕಾಶಗಳು, ಐಐಟಿ ಗುವಾಹಟಿಯಲ್ಲಿ 69 ಕೆಲಸದ ಆಫರ್‌ಗಳನ್ನು ವಿದ್ಯಾರ್ಥಿಗಳಿಗಾಗಿ ಸಂಸ್ಥೆಗಳು ನೀಡಿವೆ.