ಬೆಂಗಳೂರು: ಹೊರರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಸೇರಿ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಮಹಾಲಕ್ಷ್ಮೀಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
80.35 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ. ಶ್ರೀರಾಮಪುರದ ಮುತ್ತುರಾಜ್ (20), ಮುಂಬೈನ ಗೌತಮ್ (30), ತಿರುಪತಿಯ ರಫೀ(40) ಬಂಧಿತರು.
ಫೆ.21ರಂದು ಮಹಾಲಕ್ಷ್ಮೀಪುರಂನ ಕಮಲಮ್ಮನಗುಂಡಿ ಆಟದ ಮೈದಾನದ ಬಳಿ ಆರೋಪಿ ಮುತ್ತುರಾಜ್ ಗಾಂಜಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆತನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ 350 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಉಳಿದಿಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮುತ್ತುರಾಜ್ ಆಂಧ್ರಪ್ರದೇಶದಲ್ಲಿ ಗಾಂಜಾ ಖರೀದಿಸಿ ತಂದು ನಗರದಲ್ಲಿ ಗಿರಾಕಿಗಳನ್ನು ಹುಡುಕಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅದೇ ರೀತಿ ಉಳಿದ ಆರೋಪಿ ಗಳು ಫೆ.24ರಂದು ನಗರಕ್ಕೆ ಬರುತ್ತಿರುವುದಾಗಿ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಗೌತಮ್ ಮತ್ತು ರಫೀ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವ್ಯಕ್ತಿಯೊಬ್ಬನಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ, ಬಳಿಕ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಪ್ರಕರಣವನ್ನು ಭೇದಿಸಿರುವ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಚ್. ಎಂ. ಕಾಂತರಾಜ್ ನೇತೃತ್ವದ ತಂಡದ ಕಾರ್ಯ ವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಗಿಸಿದ್ದಾರೆ. ಈ ತಂಡಕ್ಕೆ 25 ಸಾವಿರ ರು. ನಗದು ಬಹುಮಾನ ಘೋಷಿಸಿದ್ದಾರೆ.