ಹೊಸದಿಲ್ಲಿ: ಪಾಕಿಸ್ಥಾನದ ಬಾಲಾ ಕೋಟ್‌ನಲ್ಲಿನ ಜೈಶ್-ಎ-ಮೊಹಮ್ಮದ್ ಉಗ್ರರ ನೆಲೆ ಮೇಲೆ ವಾಯುಪಡೆ ನಡೆಸಿದ ದಾಳಿ ಶೇ.80ರಷ್ಟು ಯಶಸ್ವಿಯಾಗಿದೆ ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ. ದಾಳಿ ಕುರಿತಾದ ಮಾಹಿತಿಗಳನ್ನು ವಾಯ ಪಡೆಯೇ ಕೇಂದ್ರ ಸರಕಾರಕ್ಕೆ ಸಲ್ಲಿಕೆ ಮಾಡಿದೆ. ಫೆ.26ರ ದಾಳಿ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ದಿನಕ್ಕೊಂದು ವ್ಯಾಖ್ಯಾನಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಾಯುಪಡೆ 12 ಪುಟಗಳ ಸ್ಯಾಟಲೈಟ್ ಮತ್ತು ರಾಡಾರ್‌ನ ಉನ್ನತ ಗುಣಮಟ್ಟದ ಚಿತ್ರಗಳ ದಾಖಲೆ ನೀಡಿದೆ. ಇಸ್ರೇಲ್ ನಿರ್ಮಿತ 2,000 ಬಾಂಬ್‌ಗಳನ್ನು ಅಲ್ಲಿ ಹಾಕಲಾಗಿದ್ದು, ಇವು ಮೇಲ್ಛಾವಣಿಯನ್ನು ಒಡೆದುಕೊಂಡು ನೆಲದ ಅಡಿಗೆ ಹೋದ ಅನಂತರ ಸ್ಫೋಟವಾಗುತ್ತವೆ. ಹೀಗಾಗಿ ಸ್ಫೋಟದ ತೀವ್ರತೆ ಆಂತರಿಕವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ಲಾನೆಟ್ ಲ್ಯಾಬ್ಸ್ ಚಿತ್ರದಲ್ಲಿ ಏನೂ ಕಾಣುತ್ತಿಲ್ಲ
ಭಾರತೀಯ ವಾಯುಪಡೆ ಬಾಂಬ್ ದಾಳಿ ನಡೆಸಿದ ಸ್ಥಳದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಖಾಸಗಿ ಸ್ಯಾಟಲೈಟ್ ನಿರ್ವಹಣೆ ಸಂಸ್ಥೆ ಪ್ಲಾನೆಟ್ ಲ್ಯಾಬ್ಸ್ ಪೂರೈಸಿದ ಚಿತ್ರಗಳ ಆಧಾರದಲ್ಲಿ ಈ ಮಾಹಿತಿ ಇದೆ. ಇಲ್ಲಿರುವ ಮದ್ರಸಾದ 6 ಕಟ್ಟಡಗಳಿಗೆ ಹಾನಿಯಾಗಿದ್ದು ಗೊತ್ತಾಗುತ್ತಿಲ್ಲ ಎಂದು ಸಂಸ್ಥೆ ತಿಳಿಸಿದೆ.