ನವದೆಹಲಿ: ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ (Aligarh Muslim University) ಅಲ್ಪಸಂಖ್ಯಾಕ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ ಎಂಬ ತನ್ನ 1967ರ ತೀರ್ಪನ್ನು ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ ಶುಕ್ರವಾರ (ನ.08) 4:3ರ ಬಹುಮತದಲ್ಲಿ ತಳ್ಳಿಹಾಕಿದ್ದು, ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ ಅಲ್ಪಸಂಖ್ಯಾಕ ಸಂಸ್ಥೆಯೇ ಎಂಬುದನ್ನು ಸುಪ್ರೀಂಕೋರ್ಟ್ ನ ಪ್ರತ್ಯೇಕ ತ್ರಿಸದಸ್ಯ ಪೀಠ ನಿರ್ಧರಿಸಲಿದೆ ಎಂದು ಆದೇಶ ನೀಡಿದೆ.
ಅಝೀಜ್ ಬಾಷಾ V/s ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1967ರಲ್ಲಿ, ನೀಡಿರುವ ತೀರ್ಪಿನಲ್ಲಿ, ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ ಶಾಸನಬದ್ಧ ಕಾಯಿದೆಗೆ ಒಳಪಟ್ಟಿದ್ದರಿಂದ ಅಲ್ಪಸಂಖ್ಯಾಕ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಸರ್ಕಾರವು ಈ ಸಂಸ್ಥೆಯನ್ನು ನಿಯಂತ್ರಿಸಲು ಅಥವಾ ಆಡಳಿತ ನಡೆಸಲು ಕಾನೂನು ಜಾರಿಗೆ ತಂದ ಮಾತ್ರಕ್ಕೆ ಸಂಸ್ಥೆಯು ತನ್ನ ಅಲ್ಪಸಂಖ್ಯಾಕ ಸ್ಥಾನಮಾನ ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಅಭಿಪ್ರಾವ್ಯಕ್ತಪಡಿಸಿದೆ.
ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿದೆ ಅಂದ ಮಾತ್ರಕ್ಕೆ ಇದು ಅಲ್ಪಸಂಖ್ಯಾತರಿಂದ ಸ್ಥಾಪನೆಯಾಗಿಲ್ಲ ಎಂಬ ಅರ್ಥವಲ್ಲ. ಅದೇ ರೀತಿ ಈ ವಿವಿ ಸ್ಥಾಪಿಸಲು ಶಾಸನಬದ್ಧ ನಿರ್ಣಯ ಅಂಗೀಕರಿಸಲಾಗಿದೆ ಎಂಬ ಕಾರಣಕ್ಕಾಗಿ ಅದನ್ನು ಸಂಸತ್ ಸ್ಥಾಪಿಸಿದೆ ಎಂದು ವಾದಿಸಲು ಸಾಧ್ಯವಿಲ್ಲ ಎಂದು ಬಹುಮತದ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಅಲಿಗಢ್ ಮುಸ್ಲಿಂ ಯೂನಿರ್ವಸಿಟಿ ಅಲ್ಪಸಂಖ್ಯಾಕ ಸಂಸ್ಥೆಯಲ್ಲ ಎಂದು 2006ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಂತರ ಈ ಗುಟ್ಟು ಬಯಲಾಗಿದೆ.
ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ ಅಲ್ಪಸಂಖ್ಯಾಕ ಸಂಸ್ಥೆಯೇ ಎಂದು ಆದೇಶ ನಿರ್ಧರಿಸುವ ಮೊದಲು, ಈ ಸಂಸ್ಥೆಯನ್ನು ಯಾರು ಸ್ಥಾಪಿಸಿದ್ದಾರೆ ಎಂಬುದನ್ನು ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ತಿಳಿಸಿದೆ.
ಈ ಸಂಸ್ಥೆಯ ಪ್ರಾರಂಭವನ್ನು ಪರಿಗಣಿಸಬೇಕಾಗಿದೆ. ಸಂಸ್ಥೆಯ ಸ್ಥಾಪನೆಯ ಹಿಂದಿನ ರೂವಾರಿ ಯಾರು ಎಂಬುದನ್ನು ನೋಡಬೇಕು. ಭೂಮಿಯ ಹಣವನ್ನು ಯಾರು ಪಡೆದಿದ್ದಾರೆ ಮತ್ತು ಒಂದು ವೇಳೆ ಅಲ್ಪಸಂಖ್ಯಾಕ ಸಮುದಾಯ ನೆರವು ನೀಡಿದೆಯೇ ಎಂಬುದನ್ನು ಕೋರ್ಟ್ ಆದಶದಲ್ಲಿ ತಿಳಿಸಿದೆ.
ಆದ್ಯಾಗ್ಯೂ ಸಂಸ್ಥೆಯ ಅಲ್ಪಸಂಖ್ಯಾಕರೇತರ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಅಲ್ಪಸಂಖ್ಯಾಕ ಚಾರಿತ್ರ್ಯ ಕಸಿಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬಹುಮತದ ಆದೇಶದಲ್ಲಿ ತೀರ್ಪು ನೀಡಿದೆ.