ಕೋವಿಡ್ ಬಹಳಷ್ಟು ಜನರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಪಂಚದ ಎಲ್ಲ ದೇಶಗಳ ಆರ್ಥಿಕ ವ್ಯವಸ್ಥೆಯನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ. ಹೂಡಿಕೆ, ಸಂಪಾದನೆ ಕುರಿತು ಈವರೆಗೂ ಇದ್ದ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಕಾಗಿವೆ. ವಿವಿಧ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದವರು ಈಗ ಯಾವ ಕ್ಷೇತ್ರದಲ್ಲಿ ಹಣ ಹೂಡಬೇಕು ಎಂಬ ಗೊಂದಲದಲ್ಲಿದ್ದಾರೆ. ಚಿನ್ನ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿದರೆ ಯಾವತ್ತಿಗೂ ಸೇಫ್ ಅನ್ನುತ್ತಿದ್ದವರೇ ಈಗ ಆ ಮಾತುಗಳನ್ನಾಡಲು ಹಿಂಜರಿಯುತ್ತಿರೆ. ಇಂಥ ಸಂದರ್ಭದಲ್ಲಿ, ಅಂಚೆ ಇಲಾಖೆಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದರೆ, ಹಣಕ್ಕೆ ಭದ್ರತೆ ಮಾತ್ರವಲ್ಲ, ಹೆಚ್ಚು ಬಡ್ಡಿಯನ್ನೂ ಪಡೆಯಲು ಸಾಧ್ಯವಿದೆ. ಅಂಚೆ ಇಲಾಖೆಯಲ್ಲಿ ಯಾವ ಯಾವ ಖಾತೆಗಳಲ್ಲಿ ಹೂಡಿಕೆ ಮಾಡಬಹುದು? ಬ್ಯಾಂಕ್‌ನ ಯೋಜನೆಗಳಿಗಿಂತ ಅವು ಹೇಗೆ ಹೆಚ್ಚು ಲಾಭಕರ ಎಂಬುದರ ಕುರಿತ ವಿವರ ಮಾಹಿತಿ ಇಲ್ಲಿದೆ.
1. ಉಳಿತಾಯ ಖಾತೆ: ಈ ಖಾತೆಯು ಬ್ಯಾಂಕಿನ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿ ದರ ಹೊಂದಿದೆ. ಪ್ರಸ್ತುತ ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಹಣ ಹೂಡಿದರೆ ಶೇ.4 ರಷ್ಟು ಬಡ್ಡಿ ಸಿಗುತ್ತದೆ. ಬ್ಯಾಂಕುಗಳಲ್ಲಿ ಶೇ. 2.75 ಬಡ್ಡಿ ಸಿಗುತ್ತದೆ. ಜೊತೆಗೆ, ಉಚಿತ ಡೆಬಿಟ್ ಕಾರ್ಡ್ , ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವೂ ದೊರಕುತ್ತದೆ.
2. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್: ಅಂಚೆ ಇಲಾಖೆಯಲ್ಲಿನ ಉಳಿತಾಯ ಖಾತೆ ಜೊತೆಗೆ ಐಪಿಪಿಬಿ ಡಿಜಿಟಲ್ ಖಾತೆ ತೆರೆದರೆ ಆನ್‌ಲೈನ್ ವ್ಯಾಲೆಟ್ ಸೌಲಭ್ಯ ಪಡೆಯಬಹುದು. ಅಂಚೆ ಉಳಿತಾಯ ಖಾತೆಯಿಂದ ಐಪಿಪಿಬಿ ಖಾತೆಗೆ ಅನಿಯಮಿತ ಸ್ವೀಪ್ ಇನ್ ಹಾಗ್ ಸ್ವೀಪ್ ಔಟ್ ಮಾಡಬಹುದು. ಜೊತೆಗೆ ಯಾವುದೇ ಬ್ಯಾಂಕಿಗೆ NEFT, IMPS ಹಾಗು RTGS ಆನ್ನು ಮೊಬೈಲ್ ನಿಂದಲೇ ಮಾಡಬಹುದು. ಮೊಬೈಲ್ ರೀಚಾರ್ಜ್, ಗ್ಯಾಸ್ ಹಾಗೂ ಎಲೆಕ್ಟ್ರಿಕ್ ಬಿಲ್ ಅನ್ನು ಪಾವತಿಸಬಹುದು.
3. ದಿ ಸಾವರಿನ್ ಗೋಲ್ಡ್ ಬಾಂಡ್: ಚಿನ್ನದ ಶೇಖರಣೆ ಹೆಚ್ಚಾದಂತೆ ಅದನ್ನು ಭದ್ರವಾಗಿ ಇಟ್ಟುಕೊಳ್ಳುವುದು ಸವಾಲಿನ ಕೆಲಸ. ಚಿನ್ನ ಕಳುವಾಗದಂತೆ ಇಡಬೇಕಾದರೆ ಬ್ಯಾಂಕ್ ಲಾಕರ್ ನಲ್ಲಿ ಇಡಬೇಕು. ಲಾಕರ್ ಸೌಲಭ್ಯ ಪಡೆಯಲು ಬ್ಯಾಂಕಿಗೆ ಹಣ ಪಾವತಿ ಮಾಡಬೇಕು. ಸಾವರಿನ್ ಗೋ ಬಾಂಡ್ ಯೋಜನೆಯಲ್ಲಿ ಹಣ ಹೂಡಿದರೆ, ಪ್ರಸ್ತುತ ಚಿನ್ನದ ದರದಲ್ಲಿ ಬಾಂಡ್ ನೀಡಲಾಗುತ್ತದೆ. ಈ ಬಾಂಡಿನ ಅವಧಿ 8 ವರ್ಷಗಳು. 8 ವರ್ಷದ ತರುವಾಯ ಅಂದಿನ ಚಿನ್ನದ ದರಕ್ಕೆ ಮೆಚ್ಯುರಿಟಿ ಸಿಗುತ್ತದೆ. ಇದರ ಜೊತೆಗೆ ಸರ್ಕಾರ ಪ್ರತಿ ವರ್ಷ 2.5% ಬಡ್ಡಿಯನ್ನು ನೀಡುತ್ತದೆ. ಹೂಡಿಕೆ ಸಲುವಾಗಿ ಚಿನ್ನ ಖರೀದಿಸುವವರು ಚಿನ್ನದ ಬದಲಾಗಿ ಚಿನ್ನದ ಬಾಂಡ್ ಮೇಲೆ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.
4. ಹಿರಿಯ ನಾಗರೀಕರ ಉಳಿತಾಯ ಯೋಜನೆ (SCSS): ಈ ಯೋಜನೆಯಲ್ಲಿ 60 ವರ್ಷ ದಾಟಿದವರು1000 ದಿಂದ 15 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು. ಪ್ರಸ್ತುತ ಇದರ ಬಡ್ಡಿಯ ದರ 7.4%. ಸದ್ಯಕ್ಕೆ ಯಾವ ಬ್ಯಾಂಕಿನಲ್ಲೂ ಈ ಪ್ರಮಾಣದ ಬಡ್ಡಿ ದರ ಸಿಗುವುದಿಲ್ಲ. ಈ ಯೋಜನೆಯಲ್ಲಿ ಬಡ್ಡಿಯು ಪ್ರತಿ ಮೂರು ತಿಂಗಳಿಗೊಮ್ಮೆ ದೊರಕುತ್ತದೆ. ನಿಮಗೆ ಬಡ್ಡಿಯ ಅವಶ್ಯಕತೆ ಇರದಿದ್ದರೆ, ಈ ಹಣವನ್ನು ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಸ್ವಯಂಚಾಲಿತ ವರ್ಗಾವಣೆ ಮಾಡಿಸಿ, ಅಲ್ಲಿಂದ ಬಡ್ಡಿಯ ಹಣಕ್ಕೆ ಸರಿ ಹೊಂದುವಂತೆ ಒಂದು ಆರ್.ಡಿ ಖಾತೆ ತೆರದಲ್ಲಿ, ಬಡ್ಡಿಗೆ ಮತ್ತೆ ಬಡ್ಡಿ ಗಳಿಸಬಹುದು. ಈ ಎರಡು ಖಾತೆಗಳ ಮುಕ್ತಾಯದ ಅವಧಿ 5 ವರ್ಷಗಳು.
5 .ಮಾಸಿಕ ಉಳಿತಾಯ ಯೋಜನೆ (MIS).: ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ 4.5 ಲಕ್ಷ ಹಾಗೂ ಜಂಟಿಯಾಗಿ 9 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಬಡ್ಡಿ ದೊರಕುತ್ತದೆ. ಪ್ರಸ್ತುತ ಇದರ ಬಡ್ಡಿ ದರ 6.6%. ಈ ಯೋಜನೆಯಲ್ಲೂ ಬಡ್ಡಿಯ ಅವಶ್ಯಕತೆ ಇರದಿದ್ದರೆ ಈ ಹಣವನ್ನು ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಸ್ವಯಂಚಾಲಿತ ವರ್ಗಾವಣೆ ಮಾಡಿಸಿ ಅಲ್ಲಿಂದ ಬಡ್ಡಿಯ ಹಣಕ್ಕೆ ಸರಿ ಹೊಂದುವಂತೆ ಒಂದು ಆರ್.ಡಿ ಖಾತೆ ತೆರೆದಲ್ಲಿ ಬಡ್ಡಿಗೆ ಮತ್ತೆ ಬಡ್ಡಿ ಗಳಿಸಬಹುದು. ಈ ಎರಡು ಖಾತೆಯ ಮುಕ್ತಾಯದ ಅವಧಿ 5 ವರ್ಷಗಳು.
6. ಸ್ಥಿರ ಠೇವಣಿ (TD): ಈ ಯೋಜನೆಯಲ್ಲಿ 1, 2, 3 ಹಾಗೂ 5 ವರ್ಷದವರೆಗೆ ಹಣವನ್ನು ಫಿಕ್ಸೆಡ್ ಇಡಬಹುದು. ಪ್ರಸ್ತುತ 1,2 ಮತ್ತು 3 ವರ್ಷದ ಸ್ಥಿರ ಠೇವಣಿಗೆ 5.5% ಬಡ್ಡಿ ದರವಿದೆ. 5 ವರ್ಷದ ಸ್ಥಿರ ಠೇವಣಿಗೆ 6.7% ಬಡ್ಡಿ ದರವಿದೆ. 5 ವರ್ಷದ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದಲ್ಲಿ ಆದಾಯ ತೆರಿಗೆಯ ವಿನಾಯಿತಿಯನ್ನು ಪಡೆಯಬಹುದು
7. ಕಿಸಾನ್ ವಿಕಾಸ್ ಪತ್ರ (KVP) : ಕೆವಿಪಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ ಎಷ್ಟು ಮೊತ್ತವನ್ನಾದರೂ ಹೂಡಿಕೆ ಮಾಡಬಹುದು. 10 ವರ್ಷ 4 ತಿಂಗಳಿಗೆ ಹಣ ಡಬಲ್ ಆಗುತ್ತದೆ. ಮಧ್ಯದಲ್ಲಿ ಹಣದ ಅವಶ್ಯಕತೆ ಕಂಡು ಬಂದರೆ 2.5 ವರ್ಷಗಳ ಬಳಿಕ ಖಾತೆ ಕ್ಲೋಸ್ ಮಾಡಬಹುದು. ಆಗ ನಿಮಗೆ ಖಾತೆ ಮಾಡಿಸುವಾಗ ಇದ್ದ ಬಡ್ಡಿ ದರದ ಆಧಾರದ ಮೇಲೆ ಬಡ್ಡಿ ನೀಡುವರು. ಪ್ರಸ್ತುತ ಇದರ ಬಡ್ಡಿ ದರ 6.9%.
8. ಅಂಚೆ ಜೀವ ವಿಮೆ: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆಯನ್ನು ಪಡೆದಲ್ಲಿ ಇತರೆ ಜೀವ ವಿಮೆಗಳಿಗಿಂತ ಹೆಚ್ಚಿನ ಬೋನಸ್ ಪಡೆಯಬಹುದು. ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯಲ್ಲಿ 6 ವಿವಿಧ ರೀತಿಯ ಪಾಲಿಸಿಯನ್ನು ಮಾಡಿಸಬಹುದು, ಈ ಎಲ್ಲಾ ವಿಮೆಯಲ್ಲಿನ ಹಣದ ಹೂಡಿಕೆಗೆ ಆದಾಯ ತೆರಿಗೆಯ ವಿನಾಯಿತಿ ದೊರಕುತ್ತದೆ. ಹೆಚ್ಚಿನ ಮಾಹಿತಿಗೆ www.indiapost.gov.in ಗೆ ಭೇಟಿ ನೀಡಿ.
ರಂಗನಾಥ್ ಹಾರೋಗೊಪ್ಪ