Advertisement

ಭಾರತೀಯ ಸಿನಿಮಾರಂಗದ ಯಶಸ್ವಿ ಅಪ್ಪ-ಮಕ್ಕಳ ಸ್ಟಾರ್ ಜೋಡಿ !

03:00 PM Jun 16, 2018 | Sharanya Alva |

ಅಪ್ಪನ ಬಗ್ಗೆ ಕೊಂಚ ಮುನಿಸು, ಸ್ವಲ್ಪ ಪ್ರೀತಿ, ಹೆದರಿಕೆ ಎಲ್ಲವೂ ಇರುತ್ತೆ..ತಂದೆ ಸ್ಫೂರ್ತಿಯೂ ಹೌದು..ಅಪ್ಪನಂತೆ ನಾನೂ ಆಗಬೇಕು ಎಂಬ ಹಂಬಲ ಬಹುತೇಕರಲ್ಲಿ ಇರುತ್ತೆ. ಆದರೆ ಅದರಲ್ಲಿ ಯಶಸ್ಸು ಕಾಣೋದು ಕಡಿಮೆ. ಸ್ಯಾಂಡಲ್ ವುಡ್, ಬಾಲಿವುಡ್, ಉದ್ಯಮರಂಗ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಂದೆ, ಮಕ್ಕಳ ಯಶಸ್ವಿ ಜೋಡಿ ತುಂಬಾ ಕಡಿಮೆ. ಹೀಗೆ ಹೆಸರು ಗಳಿಸಲು ಹೊರಟ ಅದೆಷ್ಟೋ ಮಂದಿ ಇಂದು ಅನಾಮಧೇಯರಂತಿದ್ದಾರೆ!

Advertisement

ತಂದೆಗೆ ತಕ್ಕ ಮಗ, ತಾಯಿಗೆ ತಕ್ಕ ಮಗ ಎಂಬ ಮಾತಿದೆ. ಅದರಂತೆ ಭಾರತೀಯ ಸಿನಿಮಾರಂಗದಲ್ಲಿ ಯಶಸ್ಸು, ಕೀರ್ತಿ ಗಳಿಸಿದ ತಂದೆ ಮತ್ತು ಮಕ್ಕಳ ಕುರಿತು ಇಲ್ಲೊಂದಿಷ್ಟು ಮಾಹಿತಿ ನಿಮಗಾಗಿ…

ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್:

ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜ್ ಕುಮಾರ್ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನಗೆದ್ದ ನಟ. ಅದೇ ರೀತಿ ಶಿವರಾಜ್ ಕುಮಾರ್ ಕೂಡಾ ಕಳೆದ 30 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದಾರೆ. ಓಂ, ನಮ್ಮೂರ ಮಂದಾರ ಹೂವೇ, ತಮಸ್ಸು, ಜೋಗಿ, ಚಿಗುರಿದ ಕನಸು, ಕಡ್ಡಿಪುಡಿ, ಸಂತೆಯಲ್ಲಿ ನಿಂತ ಕಬೀರ ಹೀಗೆ ಹಲವು ಚಿತ್ರಗಳಲ್ಲಿನ ವಿಭಿನ್ನ ನಟನೆಯಿಂದಾಗಿ ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್:

Advertisement

ಬಾಲಿವುಡ್ ನ ಆ್ಯಂಗ್ರಿ ಯಂಗ್ ಮ್ಯಾನ್, ಸೂಪರ್ ಸ್ಟಾರ್ ಎಂದು ಹೆಸರು ಗಳಿಸಿದವರು ಅಮಿತಾಬ್ ಬಚ್ಚನ್. ಅಪ್ಪನಂತೆಯೇ ಸಿನಿಮಾ ರಂಗಕ್ಕೆ ಕಾಲಿಟ್ಟ ಅಭಿಷೇಕ್ ಬಚ್ಚನ್ ಕೂಡಾ ಹೆಸರು ಮಾಡತೊಡಗಿದ್ದಾರೆ. ವಿಭಿನ್ನ ಕಥಾ ಹಂದರದ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಾಲಿವುಡ್ ನಲ್ಲಿ ನೆಲೆಯೂರಿದ್ದಾರೆ. ಪಾ ಸಿನಿಮಾದಲ್ಲಿ ಅಪ್ಪ-ಮಗನ ನಟನೆಯೇ ಅದಕ್ಕೆ ಸಾಕ್ಷಿಯಾಗಿದೆ.

ಚಿರಂಜೀವಿ, ರಾಮ್ ಚರಣ್ ತೇಜಾ:

ಟಾಲಿವುಡ್ ನಲ್ಲಿ ಭರ್ಜರಿ ಹವಾ ಎಬ್ಬಿಸಿದ್ದ ನಟ ಚಿರಂಜೀವಿ..ಹೌದು ಮೆಗಾಸ್ಟಾರ್ ಎಂಬುದು ಇವರ ಬಿರುದು. ಅಪ್ಪನಂತೆಯೇ ತಾನೂ ಕೂಡಾ ಸ್ಟಾರ್ ಆಗಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದು ಮಗ ರಾಮ್ ಚರಣ್ ತೇಜಾ! 10 ಸಿನಿಮಾಗಳಲ್ಲಿ ನಟಿಸುವ ಮೂಲಕ ಟಾಲಿವುಡ್ ನಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಹೆಮ್ಮೆ ರಾಮ್ ಚರಣ್. ಮಗಧೀರ್ ಸಿನಿಮಾ ರಾಮ್ ಚರಣ್ ತೇಜಾಗೆ ಹೆಸರು, ಹಣ ಎರಡನ್ನೂ ಗಳಿಸಿಕೊಟ್ಟಿದೆ.

ಕೃಷ್ಣಾ-ಮಹೇಶ್ ಬಾಬು:

ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟ ಮಹೇಶ್ ಬಾಬು ಅವರ ತಂದೆ ಕೃಷ್ಣ ಗಟ್ಟಾಮನೇನಿ ಬಗ್ಗೆ ಗೊತ್ತಾ? ಯಾಕೆಂದರೆ ಮಹೇಶ್ ಬಾಬುಗಿಂತ ತಂದೆ ಕೃಷ್ಣ ಅವರೇ ಹೆಚ್ಚು ಜನಪ್ರಿಯ ನಟ! 70ರ ದಶಕದಲ್ಲಿ ವಿಲನ್ ಹಾಗೂ ಹೀರೋ ಪಾತ್ರಗಳ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದರು. ಎನ್ ಟಿಆರ್, ಎಎನ್ ಆರ್ ತೆಲುಗು ಚಿತ್ರರಂಗ ಆಳುತ್ತಿದ್ದ ಕಾಲಘಟ್ಟದಲ್ಲಿ ಸ್ಟಾರ್ ಗಿರಿ ಪಡೆದುಕೊಳ್ಳುವುದು ಸುಲಭದ ಮಾತಾಗಿರಲಿಲ್ಲವಾಗಿತ್ತು. ಹೀಗಾಗಿ ಮಹೇಶ್ ಬಾಬುಗೆ ಚಿತ್ರರಂಗದಲ್ಲಿ ಬೆಳೆಯಲು ಹೆಚ್ಚು ಪರಿಚಯದ ಅಗತ್ಯವಾಗಿರಲಿಲ್ಲವಾಗಿತ್ತು. ತಂದೆ ಕೃಷ್ಣ ಅವರಂತೆ ನಟನೆಯಲ್ಲಿ ಮಗ ಮಹೇಶ್ ಬಾಬು ಇಂದು ಪ್ರಿನ್ಸ್ ಆಫ್ ಟಾಲಿವುಡ್ ಎಂಬ ಹೆಸರುಗಳಿಸಿದ್ದಾರೆ.

ಮಮ್ಮುಟ್ಟಿ ಮತ್ತು ದುಲ್ಖರ್ ಸಲ್ಮಾನ್!

ಮಲಯಾಳಂ ಸಿನಿಮಾರಂಗದ ಸ್ಟಾರ್ ನಟ ಮಮ್ಮುಟ್ಟಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತಂದೆಗೆ ತಕ್ಕ ಮಗ ಎಂಬಂತೆ ದುಲ್ಖರ್ ಸಲ್ಮಾನ್ ಕೂಡಾ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಅಚ್ಚರಿ ಎಂಬಂತೆ ದುಲ್ಖರ್ ಇಂದು ನಟನೆಯಲ್ಲಿ ತಂದೆಯನ್ನೂ ಮೀರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. 20 ಸಿನಿಮಾಗಳಲ್ಲಿ ಅಭಿನಯಿಸಿರುವ ದುಲ್ಖರ್ ತಮ್ಮ ಅದ್ಭುತ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ, ಅಷ್ಟೇ ಅಲ್ಲ ದಕ್ಷಿಣ ಭಾರತದಲ್ಲಿಯೂ ಜನಪ್ರಿಯ ನಟನಾಗಿದ್ದಾರೆ. ನಟನೆಯಾಗಿ ದುಲ್ಖರ್ 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ!

ರಾಕೇಶ್ ಮತ್ತು ಹೃತಿಕ್ ರೋಷನ್:

ಕಹೋ ನಾ ಪ್ಯಾರ್ ಹೈ ಸಿನಿಮಾ ಬಿಡುಗಡೆಗೊಂಡಾಗ ಮಾಧ್ಯಮಗಳು “ಸ್ಟಾರ್ ನಟನೊಬ್ಬ ಹುಟ್ಟಿದ್ದಾನೆ” ಎಂಬ ತಲೆಬರಹದಡಿಯಲ್ಲಿ ಲೇಖನ ಪ್ರಕಟಿಸಿದ್ದವು! ಹೌದು ಹೃತಿಕ್ ರೋಷನ್ ಪ್ರತಿಭಾವಂತ ಸೆಲೆಬ್ರಿಟಿ ಕುಟುಂಬದಿಂದ ಬಂದಿದ್ದ. ಹೃತಿಕ್ ತಂದೆ ರಾಕೇಶ್ ರೋಷನ್ ಸ್ಟಾರ್ ನಟರಾಗಿದ್ದರು. ಹೀಗಾಗಿ ತಂದೆಯನ್ನೂ ಮೀರಿಸಿ ಬೆಳೆಯುವುದು ಹೃತಿಕ್ ಗೆ ಸುಲಭದ ಮಾತಾಗಿರಲಿಲ್ಲವಾಗಿತ್ತು. ಹೃತಿಕ್ ನಟನೆಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡಾ ಹೌದು. ತಂದೆಯಂತೆ ಮಗ ಹೃತಿಕ್ ಕೂಡಾ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ರಿಷಿ ಕಪೂರ್ ಮತ್ತು ರಣಬೀರ್ ಕಪೂರ್:

ರಣಬೀರ್ ಕಪೂರ್ ಗೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದ ತಂದೆಯ ಸ್ಫೂರ್ತಿ ಮಾತ್ರ ಅಲ್ಲ, ಕುಟುಂಬದಲ್ಲಿ ದಂತಕಥೆಯಾದ ದೊಡ್ಡ ಪಟ್ಟಿಯೇ ಇತ್ತು! ಭಾರತ ಚಿತ್ರರಂಗದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪ್ರಥ್ವಿರಾಜ್ ಕಪೂರ್ ಅವರ ಮರಿಮೊಮ್ಮಗ, ರಾಜ್ ಕಪೂರ್ ಅವರ ಮೊಮ್ಮಗ ರಣಬೀರ್! ಅಪ್ಪ ರಿಷಿ ಕಪೂರ್ ಕೂಡಾ ಬಾಲಿವುಡ್ ನ ಸ್ಟಾರ್ ನಟರಾಗಿದ್ದವರು. ವಂಶವಾಹಿ ಎನ್ನುವಂತೆ ರಣಬೀರ್ ಕೂಡಾ ತಮ್ಮ ಅದ್ಭುತ ನಟನೆಯ ಮೂಲಕ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಶಿವಕುಮಾರ್ ಮತ್ತು ಸೂರ್ಯ:

ತಮಿಳು ಚಿತ್ರರಂಗದಲ್ಲಿ ಶಿವಕುಮಾರ್ ಅದ್ಭುತ ಡೈಲಾಗ್ ಡೆಲಿವರಿಯ ಸ್ಟಾರ್ ನಟರಾಗಿದ್ದವರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದವರು ಶಿವಕುಮಾರ್. ಹೀಗೆ ತಂದೆಯ ಹಾದಿ ಹಿಡಿದವರು ಸೂರ್ಯ ಮತ್ತು ಕಾರ್ತಿ! ಇಂದು ತಮಿಳು ಚಿತ್ರರಂಗದಲ್ಲಿ ಸೂರ್ಯ ಅತ್ಯಂತ ಯಶಸ್ವಿ ಹಾಗೂ ಬೇಡಿಕೆ ನಟರಾಗಿದ್ದಾರೆ. ಸಹೋದರ ಕಾರ್ತಿ ಕೂಡಾ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next