ಬೆಂಗಳೂರು: ನಾಲ್ಕು ದಿನಗಳ ಹಿಂದಷ್ಟೇ ರೈಲ್ವೆ ಸಚಿವರು ಘೋಷಿಸಿದ್ದ ಎಂಟು ಹೊಸ ಉಪನಗರ ರೈಲುಗಳ ಸೇವೆ ಸೋಮವಾರದಿಂದ ಆರಂಭಗೊಂಡಿದೆ. ವಾರದಲ್ಲಿ ಆರು ದಿನ (ಭಾನುವಾರ ಹೊರತುಪಡಿಸಿ) ಸಂಚರಿಸಲಿರುವ ಈ ಹೊಸ ರೈಲುಗಳ ಪೈಕಿ ತಲಾ ನಾಲ್ಕು ಮೆಮು ಮತ್ತು ಡೆಮು ಸೇವೆಗಳಾಗಿವೆ. ಈ ಸಂಬಂಧದ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ.
ನಿತ್ಯ ಪ್ರತಿ ರೈಲಿನಲ್ಲಿ 2 ಸಾವಿರ ಪ್ರಯಾಣಿಕರಂತೆ ಅಂದಾಜು 16 ಸಾವಿರ ಮಂದಿ ಸಂಚರಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮೊದಲ ದಿನವೇ 12 ಸಾವಿರ ಮಂದಿ ಪ್ರಯಾಣಿಸಿದ್ದಾರೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣ-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ಮೆಮು ಮತ್ತು ಬಾಣಸವಾಡಿ-ಬೈಯಪ್ಪನಹಳ್ಳಿ-ಹೊಸೂರು ಮಾರ್ಗವಾಗಿ ಡೆಮು ರೈಲುಗಳು ಸಂಚರಿಸುತ್ತಿವೆ. ಪ್ರತಿ ರೈಲು ಆರು ಬೋಗಿಗಳನ್ನು ಒಳಗೊಂಡಿದ್ದು, 600 ಆಸನಗಳು ಮತ್ತು 1,800 ನಿಲುಗಡೆ (ಸ್ಟಾಂಡಿಂಗ್) ಸೇರಿದಂತೆ 2,400 ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ.
ಸೋಮವಾರ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಅತಿ ಕಡಿಮೆ 1,200 ಹಾಗೂ ಸಿಟಿ ರೈಲು ನಿಲ್ದಾಣ-ಬೈಯಪ್ಪನಹಳ್ಳಿ ನಡುವೆ ಅತಿ ಹೆಚ್ಚು 2 ಸಾವಿರಕ್ಕೂ ಅಧಿಕ ಜನ ಪ್ರಯಾಣಿಸಿದ್ದಾರೆ ಎಂದೂ ಅವರು ಹೇಳಿದರು.
ಬೈಯಪ್ಪನಹಳ್ಳಿಯಲ್ಲಿ ರೈಲು ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣಗಳು ಅಕ್ಕಪಕ್ಕದಲ್ಲಿವೆ. ಮೆಟ್ರೊ ಹಾಗೂ ಸಬ್‌ಅರ್ಬನ್ ರೈಲುಗಳನ್ನು ಬಳಸಿಕೊಂಡು ಪ್ರಯಾಣವನ್ನು ಯೋಜಿಸಲು ಈ ಹೊಸ ಸೇವೆಯಿಂದ ಅನುಕೂಲವಾಗಲಿದೆ. ಪ್ರಸ್ತುತ 108 ಉಪನಗರ ರೈಲುಗಳು ಸೇವೆಯಲ್ಲಿದ್ದು, ಹೊಸ ಎಂಟು ರೈಲುಗಳ ಸೇರ್ಪಡೆಯಿಂದ ಈ ಸಂಖ್ಯೆ 116ಕ್ಕೆ ಏರಿದೆ.
ರೈಲುಗಳ ವೇಳಾಪಟ್ಟಿ
ಮೆಮು ರೈಲುಗಳು
ಎಲ್ಲಿಂದ ಎಲ್ಲಿಗೆ ನಿರ್ಗಮನ ಆಗಮನ
ಬೈಯಪ್ಪನಹಳ್ಳಿ ವೈಟ್‌ಫೀಲ್ಡ್ (06568) ಸಂಜೆ 4.45 ಸಂಜೆ 17.05
ವೈಟ್‌ಫೀಲ್ಡ್ ಬೈಯಪ್ಪನಹಳ್ಳಿ (06567) 09.00 09.20
ಬೈಯಪ್ಪನಹಳ್ಳಿ ಕೆಎಸ್‌ಆರ್ (06569) 6.45 7.15
ಕೆಎಸ್‌ಆರ್ ಬೈಯಪ್ಪನಹಳ್ಳಿ (06570) 07.50 08.15
ಡೆಮು ರೈಲುಗಳು
ಎಲ್ಲಿಂದ ಎಲ್ಲಿಗೆ ನಿರ್ಗಮನ ಆಗಮನ
ಬಾಣಸವಾಡಿ ಹೊಸೂರು (06571) 09.50 11.00
ಹೊಸೂರು ಬಾಣಸವಾಡಿ (06572) 11.15 12.25
ಬಾಣಸವಾಡಿ ಹೊಸೂರು (06573) 12.40 1.45
ಹೊಸೂರು ಬಾಣಸವಾಡಿ (06574) 3.20 4.40
2006ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಮೆಮು ರೈಲುಗಳ ಸಂಚಾರ ಆರಂಭಿಸಿತ್ತು. ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಉಪನಗರ ರೈಲು ಯೊಜನೆ ಜಾರಿಯಾಗುತ್ತಿದೆ.