ಹಾಸನ: ಪ್ರಧಾನಿ ಮೋದಿ ಅವರು 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಆಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಕರ್ನಾಟಕದ 55 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ನೈರುತ್ಯ ರೈಲ್ವೆ ಯೋಜಿಸಿದೆ. ಅದರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ರೈಲು ನಿಲ್ದಾಣ ಸೇರಿದಂತೆ 8 ರೈಲು ನಿಲ್ದಾಣಗಳ ಅಭಿವೃದ್ಧಿಯನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈ 8 ರೈಲು ನಿಲ್ದಾಣಗಳ ಪುನರಾಭಿವೃದ್ಧಿಯ 171.17 ಕೋಟಿ ರೂ. ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಲಾಗುತ್ತಿದೆ.
ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಯಲ್ಲಿ ನಿಲ್ದಾಣಗಳ ಆಕರ್ಷಣೀಯ ಪ್ರವೇಶ ದ್ವಾರ ನಿರ್ಮಾಣ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತ ಕೊಠಡಿ ವ್ಯವಸ್ಥೆ, ವಿಶೇಷ ಚೇತನ ಹಾಗೂ ವೃದ್ಧ ಪ್ರಯಾಣಿಕರಿಗೆ ಅನು ಕೂಲ ಆಗುವಂತೆ ಲಿಫ್ಟ್ ಮತ್ತು ಎಸ್ಕಲೇಟರ್ ವ್ಯವಸ್ಥೆ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಒಂದು ನಿಲ್ದಾಣ ಮತ್ತು ಒಂದು ಉತ್ಪನ್ನ ಮಳಿಗೆಗಳ ನಿರ್ಮಾಣ, ರೀಟೈಲ್ ಮಳಿಗೆಗಳ ನಿರ್ಮಾಣ ಎಕ್ಸಿಕ್ಯೂಟಿವ್ ಲಾಂಜ್ ಸೇರಿದಂತೆ ಹಲವು ಸೌಕರ್ಯಗಳನ್ನೊಳಗೊಂಡ ಮಾಸ್ಟರ್ ಪ್ಲಾನ್‌ಗೆ ಆ.6ರಂದು ಚಾಲನೆ ಸಿಗುತ್ತಿದೆ.
ಪರಿಸರ ಸ್ನೇಹಿ ರೈಲು ನಿಲ್ದಾಣ: ರೈಲು ನಿಲ್ದಾಣದ ಕಟ್ಟಡವನ್ನು ಆಧುನಿಕ ವಾಸ್ತು ವಿನ್ಯಾಸದೊಂದಿಗೆ ಪುನರ್ ರೂಪಿಸುವುದು. ನಿಲ್ದಾಣದ ಎರಡೂ ಬದಿಗಳನ್ನು ನಗರದೊಂದಿಗೆ ಸಂಪರ್ಕಿಸುವ ವ್ಯವಸ್ಥೆ, ಜಲ್ಲಿಕಲ್ಲು ರಹಿತ ಟ್ರ್ಯಾಕ್‌ಗಳ ನಿರ್ಮಾಣ, ರೂಫ್ ಫ್ಲಾಜಾಗಳ ವ್ಯವಸ್ಥೆ, ಸುಸ್ಥಿರ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಯೊಂದಿಗೆ ರೈಲು ನಿಲ್ದಾಣಗಳನ್ನು ನಗರ ಕೇಂದ್ರ (ಸಿಟಿ ಸೆಂಟರ್) ಗಳಾಗಿ ರೂಪಿಸುವುದು ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆ ಪ್ರಮುಖ ಉದ್ದೇಶವಾಗಿದೆ. ಆ.6 ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಕರ್ನಾಟಕದ 8 ರೈಲು ನಿಲ್ದಾಣಗಳೂ ಸೇರಿದಂತೆ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಚಾಲನೆ ನೀಡುತ್ತಿದ್ದಾರೆ.
ಯಾವ ನಿಲ್ದಾಣಗಳಿಗೆ ಎಷ್ಟು ವೆಚ್ಚ ?: ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆ ಮೊದಲ ಹಂತದಲ್ಲಿ ನೈರುತ್ಯ ರೈಲ್ವೆ ವಲಯದ ಹುಬ್ಬಳಿ ವಿಭಾಗದ 6 ನಿಲ್ದಾಣಗಳು ಹಾಗೂ ಮೈಸೂರು ವಿಭಾಗದ 2 ರೈಲು ನಿಲ್ದಾಣಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಹುಬ½ಳ್ಳಿ ವಿಭಾಗದ ಅಳ್ನಾವರ ನಿಲ್ದಾಣದ ಅಭಿವೃದ್ಧಿಗೆ 17.2 ಕೋಟಿ ರೂ., ಘಟಪ್ರಭಾ ನಿಲ್ದಾಣ – 19.2 ಕೋಟಿ ರೂ.,ಗೋಕಾಕ್ ರೋಡ್ ನಿಲ್ದಾಣ – 17 ಕೋಟಿ ರೂ., ಗದಗ ನಿಲ್ದಾಣ – 23.2 ಕೋಟಿ ರೂ., ಕೊಪ್ಪಳ ನಿಲ್ದಾಣ – 21.1 ಕೋಟಿ ರೂ., ಬಳ್ಳಾರಿ ನಿಲ್ದಾಣ – 16.7 ಕೋಟಿ ರೂ., ಮೈಸೂರು ವಿಭಾಗದ ಅರಸೀಕೆರೆ ನಿಲ್ದಾಣ – 34.1 ಕೋಟಿ ರೂ. ಮತ್ತು ಹರಿಹರ ನಿಲ್ದಾಣದ ಪುನರಾಭಿವೃದ್ಧಿಗೆ 25.2 ಕೋಟಿ ರೂ.ನಿಗದಿಯಾಗಿದೆ.
ರೈಲು ನಿಲ್ದಾಣದ ಸಮೀಪ ಹಳಿಗಳ ಮೂಲಕ ಸುಬ್ರಹ್ಮಣ್ಯ ನಗರ, ಮಲ್ಲೇಶ್ವರ ನಗರ, ಕಾಳನ ಕೊಪ್ಪಲು ಮತ್ತು ಕಾಟೀಕೆರೆ ಗೆ ಸಂಚರಿಸುವ ಮಾರ್ಗವಿತ್ತು. ಅಲ್ಲಿಗೆ ಒಂದು ರೈಲ್ವೆ ಗೇಟ್ ಕೂಡ ಇತ್ತು. ಆದರೆ ಫ್ಲಾಟ್ ಫಾರಂ ಉದ್ದ ಹೆಚ್ಚಳವಾಗಿದ್ದರಿಂದ ರೈಲ್ವೆ ಗೇಟ್ ಬಂದ್ ಮಾಡಿ ಜನರು ಹಾಗೂ ವಾಹನ ಸಂಚಾರ ಬಂದ್ ಮಾಡಿದ್ದರಿಂದ ನಾಲ್ಕು ಬಡಾವಣೆಗಳ ಜನರು ಕಿ.ಮೀ. ಗಟ್ಟಲೆ ಸುತ್ತಿ ಬಳಸಿ ಸಂಚರಿಸಬೇಕಾಗಿದೆ. ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡಿದರೆ ಈ ಬಡಾವಣೆಗಳ ಜನರಿಗೆ ಸಂಚಾರ ಸುಗಮವಾಗಲಿದ್ದು, ರೈಲು ನಿಲ್ದಾಣದ ಸಂಪರ್ಕವೂ ಸನಿಹವಾಗುತ್ತದೆ. ಆದರೆ, ರೈಲ್ವೆ ಇಲಾಖೆ ಮೇಲ್ಸೆತುವೆ ಬೇಡಿಕೆ ಈಡೇರಿ ಸಲು ಮನಸ್ಸು ಮಾಡುತ್ತಿಲ್ಲ. ಈ ಸಮಸ್ಯೆ ಹೊರತುಪಡಿಸಿ ಅರಸೀಕೆರೆ ರೈಲು ನಿಲ್ದಾಣವು ನಗರದ ಮಧ್ಯೆ ಹಾಗೂ ಪ್ರಮುಖ ವಾಣಿಜ್ಯ ಪ್ರದೇಶಗಳ ಸನಿಹವಿದೆ. ಜತೆಗೆ ಈಗ 34 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿ ರುವುದರಿಂದ ಇನಷ್ಟು ಆಕರ್ಷಣೀಯ ಹಾಗೂ ಮೂಲ ಸೌಕರ್ಯ ಹೊಂದಲಿದೆ.
ಅರಸೀಕೆರೆ ಫ್ಲೈಓವರ್ ಕನಸು:
ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಯ ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳುತ್ತಿರುವ 8 ನಿಲ್ದಾಣಗಳ ಅಭಿವೃದ್ಧಿಯ ಯೋಜನೆಯಲ್ಲಿ ಅರಸೀಕೆರೆ ರೈಲು ನಿಲ್ದಾಣಕ್ಕೆ ಅತಿ ಹೆಚ್ಚು 34. 1 ಕೋಟಿ ರೂ. ನಿಗದಿಯಾಗಿದೆ. ಆದರೆ ಅರಸೀಕೆರೆ ರೈಲು ನಿಲ್ದಾಣ ದ ಬಳಿ ಮೇಲ್ಸೆತುವೆ ನಿರ್ಮಾಣ ಮಾಡಿ ಮೂರು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸಬೇಕೆಂಬ ಒಂದು ದಶಕದ ಬೇಡಿಕೆ ಮಾತ್ರ ಈಡೇರುವ ಸೂಚನೆಗಳು ಕಾಣುತ್ತಿಲ್ಲ.
-ಎನ್. ನಂಜುಂಡೇಗೌಡ