ಚಿಕ್ಕಮಗಳೂರು: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಜಿಲ್ಲೆಯ 8 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ. ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಒಪ್ಪಿಗೆ ಸೂಚಿಸಿದ್ದು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್.ಎನ್. ಉಮೇಶ್ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಸದ್ಯ 200ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.
ಕೋವಿಡ್-19 ಚಿಕಿತ್ಸಾ ಘಟಕದಲ್ಲಿ ಹಾಸಿಗೆಗಳ ಕೊರತೆಯಿಲ್ಲ, ಐಸೋಲೇಷನ್ ವಾರ್ಡ್‌ನಲ್ಲಿ ವೆಂಟಿಲೇಟರ್ ಸೇರಿದಂತೆ 150 ಹಾಸಿಗೆ ಇದೆ. ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಹೈಪ್ಲೋ ಆಕ್ಸಿಜನ್ ಸಹಿತ 50 ಹಾಸಿಗೆ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ 8 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಆಯ್ಕೆ ಮಾಡಿದೆ. ಜಿಲ್ಲಾಡಳಿತ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಸರ್ಕಾರ ಕಾಲಕಾಲಕ್ಕೆ ನೀಡುವ ನೀಡುವ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಲಿವೆ ಎಂದರು.
ಚಿಕ್ಕಮಗಳೂರು ನಗರದಲ್ಲಿ ಐದು ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ನಗರಸಿಂಹರಾಜಪುರ, ಕೊಪ್ಪ ಹಾಗೂ ಕಡೂರು ತಾಲೂಕಿನಲ್ಲಿ ಒಂದೊಂದು ಆಸ್ಪತ್ರೆಯನ್ನು ಗುರುತಿಸಲಾಗಿದೆ. ಚಿಕ್ಕಮಗಳೂರು ನಗರದ ಹೋಲಿ ಕ್ರಾಸ್ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಕೆಆರ್‌ಎಸ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ರೆಟಿಕಾರ್ನ್ ಕಣ್ಣಿನ ಆಸ್ಪತ್ರೆ, ವಾಸ್ತಲ್ಯ ಆಸ್ಪತ್ರೆ ಗುರುತಿಸಲಾಗಿದೆ. ಕಡೂರು ಪಟ್ಟಣದಲ್ಲಿರುವ ಮಾರುತಿ ಆಸ್ಪತ್ರೆ, ಕೊಪ್ಪ ಪಟ್ಟಣದಲ್ಲಿರುವ ಪ್ರಶಾಮಣಿ ಆಸ್ಪತ್ರೆ ಹಾಗೂ ನರಸಿಂಹರಾಜಪುರ ಪಟ್ಟಣದ ಪುಷ್ಪಾ ಆಸ್ಪತ್ರೆ ಗುರುತಿಸಲಾಗಿದೆ ಎಂದರು.
ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಸಾಕಷ್ಟು ಹಾಸಿಗೆ ವ್ಯವಸ್ಥೆ ಇರುವುದರಿಂದ ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿಲ್ಲ, ಆದರೆ, ಮುಂದಿನ ದಿನಗಳಲ್ಲಿ ಅಗತ್ಯಕ್ಕನುಗುಣವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಸಾಕಷ್ಟು ಮಂದಿ ಜಿಲ್ಲೆಗೆ ಬರುತ್ತಿದ್ದು ಜಿಲ್ಲೆಗೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷಗೆ ಒಳಗಾಗಬೇಕು. ಜಿಲ್ಲಾದ್ಯಂತ ಗ್ರಾಮ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು ಹೊರ ಜಿಲ್ಲೆ, ರಾಜ್ಯಗಳಿಂದ ಜಿಲ್ಲೆಗೆ ಹಿಂದಿರುಗಿದವರ ಪತ್ತೆ, ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಕೊರೊನಾ ಸೋಂಕಿತ ಗರ್ಭಿಣಿಯೊಬ್ಬರು ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗದ್ದಾರೆ. ವಿಶೇಷ ನಿಗಾ ವಹಿಸಿ ಮಗು ಮತ್ತು ತಾಯಿಯ ಆರೈಕೆ ಮಾಡಲಾಗುತ್ತಿದೆ ಎಂದರು.