ಮೈಸೂರು: ನಗರದಲ್ಲಿ ಅಗತ್ಯ ಸಿಬ್ಬಂದಿ, ವೈದ್ಯಕೀಯ ಸೌಕರ್ಯಗಳು ಮತ್ತು ಸಲಕರಣೆಗಳು ಇರುವ 8 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸಂಪರ್ಕಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸೆಗೆ ಸಂಪರ್ಕಿಸಲಾಗಿದೆ.
ಒಂದೆರಡು ಆಸ್ಪತ್ರೆ ಬಿಟ್ಟರೆ ಮತ್ಯಾರೂ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಸಿದ್ಧತೆ ಮಾಡಿಕೊಂಡಿರುವವರೂ ಚಿಕಿತ್ಸೆ ನೀಡಲು ಒಪ್ಪಿಗೆ ಸೂಚಿಸುವ ಸ್ಥಿತಿಯಲ್ಲಿಲ್ಲ. ಮನವರಿಕೆ ಮಾಡಿಕೊಟ್ಟಿದ್ದೇವೆ. ಒಂದು ವೇಳೆ ಅವರು ಒಪ್ಪಿದರೆ ವೆಚ್ಚ ಭರಿಸಲು ಶಕ್ತಿ ಇರುವವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಇತರ ಸಿಬ್ಬಂದಿ ಮಿಕ್ಕ ರೋಗಿಗಳ ಬಳಿ ಹೋಗಬಾರದು.
ಈ ಷರತ್ತುಗಳ ಅನುಸಾರ ಖಾಸಗಿ ಆಸ್ಪತ್ರೆಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾನವ ಸಂಪನ್ಮೂಲದ ಕೊರತೆಯಾಗಬಹುದು. ಏಕೆಂದರೆ ಒಮ್ಮ ಚಿಕಿತ್ಸೆ ನೀಡಿದ ಸಿಬ್ಬಂದಿ 14 ದಿನ ಕ್ವಾಂರಂಟೈನ್‌ನಲ್ಲಿ ಇರಬೇಕಾಗುತ್ತದೆ. ಮುಂದೆ ಸಿಬ್ಬಂದಿ ಕೊರತೆ ಎದುರಾಗುವ ಸಾಧ್ಯತೆಗಳೂ ಇದೆ. ಜಿಲ್ಲೆಗೆ ಬೆಂಗಳೂರು, ತಮಿಳುನಾಡಿನಿಂದಬರುತ್ತಿರುವವರಲ್ಲಿ ಹೆಚ್ಚು ಪಾಸಿಟಿವ್ ಕೇಸ್‌ಗಳು ಬರುತ್ತಿವೆ. ನಾವು ಮಾನಸಿಕವಾಗಿ ಇನ್ನೂ ಹೆಚ್ಚಿನ ಪ್ರಕರಣ ನೋಡಲು ತಯಾರಾಗಿರಬೇಕು ಎಂದರು.
ವಿವಿಧೆಡೆ ಪೂರಕ ಸಿದ್ಧತೆ: ವಿವಿ ಪುರಂ ಮೆಟರ್ನಿಟಿ ಆಸ್ಪತ್ರೆಯನ್ನು ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಬಳಸಲಾಗುತ್ತದೆ. ನಗರದ ವಿವಿಧೆಡೆ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ಗಳನ್ನು ಗುರುತಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿಯೂ 100 ಬೆಡ್ ಗಳಿದ್ದು, ಅಗತ್ಯವಿದ್ದಾಗ ಅದನ್ನೂ ಕೋವಿಡ್ ಹೆಲ್ತ… ಕೇರ್ ಸೆಂಟರ್ ಆಗಿ ಬಳಸಿಕೊಳ್ಳಲಾಗುತ್ತದೆ. ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಮುಕ್ತ ವಿವಿ ಕಟ್ಟಡ ಬಳಸಿಕೊಳ್ಳುತ್ತೇವೆ ಎಂದು ಹೇಳಿದರು.