Advertisement

ಹಿರಿಯರ ಸಾವಿನ ನಂತರ ಮಾಡಲೇಬೇಕಾದ 8 ಮುಖ್ಯ ಕೆಲಸಗಳು 

02:41 PM Sep 04, 2017 | |

ಮನೆಯ ಯಜಮಾನ ಸತ್ತರೆ ಮುಂದೇನು ಮಾಡುವುದು ಎಂಬ ಈ ಪ್ರಶ್ನೆ ಬರುತ್ತದೆ. ಇದು ಬದುಕಿಗೆ ಮಾತ್ರವಲ್ಲ. ಹಣ, ಸಾಲ, ಆಸ್ತಿ ಹಂಚಿಕೆ ವಿಚಾರದಲ್ಲೂ ಕೂಡ. ಯಜಮಾನನಿಗೆ ಹೆಂಡತಿ, ಒಂದಿಬ್ಬರು ಮಕ್ಕಳು ಇದ್ದರು ಎಂದಿಟ್ಟುಕೊಳ್ಳೋಣ.  ಧಾರ್ಮಿಕವಾಗಿ, ನಂಬಿಕೆಗಳಿಗೆ ಅನುಸಾರವಾಗಿ, ಆತ ಸತ್ತ ನಂತರ ಏನೇನು ಮಾಡಬೇಕೋ ಅದನ್ನು ಆತನ  ವಾರಸುದಾರರು ಮಾಡುತ್ತಾರೆ. ಅದು ಭಾವನಾತ್ಮಕ ಸಂಗತಿ.  ವ್ಯಾವಹಾರಿಕವಾಗಿ ಏನೇನು ಕ್ರಮ ಅನುಸರಿಸಬೇಕು ಎಂಬುದರತ್ತ ಒಮ್ಮೆ ಗಮನಿಸೋಣ. ಅನೇಕ ಮಂದಿಗೆ ಗತಿಸಿ ಹೋದ ತಮ್ಮ ಅಪ್ಪ ಎಲ್ಲಿ ಠೇವಣಿ ಇಟ್ಟಿದ್ದರು, ಯಾವ್ಯಾವ ವಿಮಾಪಾಲಿಸಿ ಮಾಡಿಸಿದ್ದರು ಮತ್ತು ಎಲ್ಲೆಲ್ಲಿ ಸೈಟುಕೊಂಡಿದ್ದರು ಎಂಬುದರ ಮಾಹಿತಿಯೂ ಇರುವುದಿಲ್ಲ.  ಅದೆಲ್ಲವೂ ಬೆಳಕಿಗೆ ಬರುವುದು ವ್ಯಕ್ತಿ ಸತ್ತ ನಂತರವೇ ಅಲ್ಲವೇ?   ಈ ದಿಸೆಯಲ್ಲಿ ಮನೆಯ ಯಜಮಾನ ತೀರಿಕೊಂಡ ನಂತರದಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕು, ಅದು ಎಷ್ಟು ಅಗತ್ಯ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Advertisement

1.    ಡೆತ್‌ ಸರ್ಟಿಫಿಕೇಟಿನ ಪ್ರತಿ ಹೆಚ್ಚಿರಲಿ:
ಇದು ಬಹಳ ಅವಶ್ಯಕ. ಏಕೆಂದರೆ, ಮೃತ ವ್ಯಕ್ತಿಯ ಕುರಿತಾದ ಪ್ರತಿಯೊಂದು ದಾಖಲೆ ವರ್ಗಾವಣೆಗೆ, ಖಾತೆ ಕ್ಲೋಸ್‌ ಮಾಡುವುದಕ್ಕೆ ಹೀಗೆ ಎಲ್ಲ ಕೆಲಸಗಳಿಗೂ ಆತನ ಮರಣಸಮರ್ಥನ ಪತ್ರ ತುಂಬಾ ಅಗತ್ಯ. ಅದಿಲ್ಲದೇ ಹೋದರೆ ಕೆಲಸವೇ ಆಗುವುದಿಲ್ಲ. ಹಾಗಾಗಿ, ಪಡೆಯುವಾಗಲೇ ಒಂದಕ್ಕಿಂತ ಹೆಚ್ಚು ಪ್ರತಿಗಳನ್ನು ಪಡೆದು ಸಾಕಷ್ಟು ಜೆರಾಕ್ಸ್‌ ಮಾಡಿಸಿ, ದೃಢೀಕರಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಮರಣವು ಆಸ್ಪತ್ರೆಯಲ್ಲಿ ಆಗಿದ್ದರೆ ಅಲ್ಲಿಂದ ಸ್ಥಳೀಯ ಮುನಿಸಿಪಾಲಿಟಿಗೋ, ಕಾರ್ಪೊರೇಶನ್‌ಗೊà ಮಾಹಿತಿ ಹೋಗಿರುತ್ತದೆ.  ನೀವು ಅಲ್ಲಿಗೆ ಹೋಗಿ ಅರ್ಜಿ ಸಲ್ಲಿಸಿ ಮರಣ ದೃಢೀಕರಣ ಪತ್ರ ಪಡೆಯಬೇಕಾಗುತ್ತದೆ. ಮೃತ ವ್ಯಕ್ತಿಯ ಹೆಸರು ದಾಖಲಾತಿಗಳಲ್ಲಿ ಇರುವಂತೆಯೇ ಮರಣ ದೃಢೀಕರಣ ಪತ್ರದಲ್ಲೂ ಇರಬೇಕು. ಒಂದು ವೇಳೆ ವ್ಯತ್ಯಾಸವಾಗಿದ್ದರೆ ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳಿ. ಇಲ್ಲವಾದರೆ ಮುಂದೆ ತೊಂದರೆಯಾಗುವ ಸಾಧ್ಯತೆ ಇದೆ. 

2.    ಸಕ್ಸೆಶನ್‌ ಸರ್ಟಿಫಿಕೇಟ್‌ 
ಸಾಮಾನ್ಯವಾಗಿ ಎಲ್ಲರೂ ತಮ್ಮ ಜೀವಿತದ ನಂತರ ತಮ್ಮ ಆಸ್ತಿಪಾಸ್ತಿ ಯಾರಿಗೆ ಸೇರಬೇಕು ಎಂಬ ಬಗ್ಗೆ ವಿಲ್‌ ಮಾಡಿಟ್ಟಿರುವುದಿಲ್ಲ. ಎಲ್ಲೋ ಕೆಲವರು ಮಾಡಿಸಿರುತ್ತಾರೆ. ನಾಳೆ ಮಾಡಿದರಾಯಿತು ಎಂಬ ಭಾವನೆಯಲ್ಲೇ ದಿನ ದೂಡುತ್ತಿದ್ದ ಕೆಲವರು ವಿಲ್‌ ಮಾಡದೆಯೇ ಸತ್ತುಬಿಟ್ಟಿರುತ್ತಾರೆ.  ಒಂದು ವೇಳೆ ವಿಲ್‌ ಇದ್ದರೆ, ಅದರಂತೆಯೇ ಆಸ್ತಿಗಳ ವಿಲೆವಾರಿ ಆಗುತ್ತದೆ. ಆಗ ತಕರಾರೇನೂ ಆಗದು. ಆದರೆ ವಿಲ್‌ ಇಲ್ಲದೇ ಇದ್ದರೆ ಏನು ಮಾಡುವುದು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತಹ ಸಂದರ್ಭದಲ್ಲಿ ಸಕ್ಷಮ ಅಧಿಕಾರಿಯಿಂದ ಸಕ್ಸೆಶನ್‌ ಸರ್ಟಿಫಿಕೇಟ್‌ ಪಡೆಯಬೇಕಾಗುತ್ತದೆ. ಮೃತರ ಡೆತ್‌ ಸರ್ಟಿಫಿಕೇಟ್‌ನೊಂದಿಗೆ ರೆವಿನ್ಯೂ ಕಚೇರಿಗೆ ಅರ್ಜಿ ಸಲ್ಲಿಸಿ ಕುಟುಂಬ ಸದಸ್ಯರ ದೃಢೀಕರಣ ಪತ್ರ ಪಡೆಯುವುದೂ ಒಂದು ಪ್ರಕ್ರಿಯೆ.  ಅದರಲ್ಲಿ ನಮೂದಾಗಿರುವ ಮಂದಿಯೇ ಮೃತ ವ್ಯಕ್ತಿ ಬಿಟ್ಟು ಹೋದ ಎಲ್ಲ ಆಸ್ತಿಗಳಿಗೆ ಉತ್ತರಾಧಿಕಾರಿಗಳು ಎಂಬುದು ಕಾನೂನುಸಮ್ಮತವಾಗುತ್ತದೆ. 

3.    ಎಲ್ಲ ದಾಖಲೆಗಳನ್ನೂ ಒಟ್ಟುಗೂಡಿಸಿ:
ಇದು ಬಹಳ ಕಷ್ಟದ ಕೆಲಸ. ಮೃತ ವ್ಯಕ್ತಿ ಬಿಟ್ಟುಹೋದ ಆಸ್ತಿಗಳ ದಾಖಲೆಗಳನ್ನು ಎಲ್ಲೆಲ್ಲಿ ಇಟ್ಟಿರುತ್ತಾರೆಂಬುದು ಊಹೆಗೂ ನಿಲುಕದ ಸಂಗತಿ. ಒಂದೇ ಕಡೆ ಜೋಡಿಸಿ ಇಟ್ಟಿದ್ದರೆ ಹಾದಿ ಸುಗಮ. ಇಲ್ಲದೇ ಹೋದರೆ ಅವುಗಳನ್ನು ಒಟ್ಟುಗೂಡಿಸುವುದು, ಹುಡುಕುವುದು ತ್ರಾಸದಾಯಕ ಕೆಲಸವೇ ಸರಿ.  ಸ್ಥಿರಾಸ್ತಿ ದಾಖಲೆ, ಎಫ್.ಡಿ. ದಾಖಲೆ,  ವಿಮಾಪತ್ರಗಳು, ಎನ್‌.ಎಸ್‌.ಸಿ. ಶೇರುಗಳು, ಬಾಂಡುಗಳು, ಸಾಲಗಳ ದಾಖಲೆ, ಹೀಗೆ…ಕುಟುಂಬದ ವಕೀಲರು, ಲೆಕ್ಕಪರಿಶೋಧಕರನ್ನು ಸಂಪರ್ಕಿಸಿ ಇವೆಲ್ಲವನ್ನೂ ಕಲೆಹಾಕಬೇಕು.

4.    ಹೊಣೆಗಾರಿಕೆಗಳ ಪಟ್ಟಿ ಮಾಡಿ
ಮೃತವ್ಯಕ್ತಿ ವ್ಯವಹಾರಸ್ಥರಾದರೆ, ತಾವು ಸಾಯುವ ದಿನದವರೆಗಿನ ಲೇವಾದೇವಿ, ಲೆಕ್ಕಪತ್ರಗಳನ್ನು ಹಾಗೇ ಬಿಟ್ಟು ಹೋಗಿರುತ್ತಾರಲ್ಲವೇ? ಮೃತರಿಗೆ ಎಷ್ಟು ಬಾಕಿ ಯಾರ್ಯಾರಿಂದ ಬರಬೇಕು, ಕೊಡಬೇಕಾದ ಹೊರಸಾಲಗಳು ಎಷ್ಟು ಎಂಬುದನ್ನು ಒಂದು ಕಡೆ ಪಟ್ಟಿ ಮಾಡಬೇಕಾಗುತ್ತದೆ. ಬ್ಯಾಂಕಿನಲ್ಲಿ  ಸಾಲದ ಕಂತುಗಳ ತೀರುವಳಿಗೆ ಇ.ಸಿ.ಎಸ್‌. ವ್ಯವಸ್ಥೆ ಮಾಡಿದ್ದಲ್ಲಿ ಆ ಕಡೆಯೂ ಗಮನ ವಹಿಸಬೇಕು. ಕ್ರೆಡಿಟ್‌ ಕಾರ್ಡಿನ ಲೆಕ್ಕಾಚಾರಗಳು, ಪಾವತಿಸಬೇಕಾದ ಬಾಕಿ ಬಿಲ್ಲುಗಳು ಇವೆಲ್ಲವನ್ನೂ ಪಟ್ಟಿ ಮಾಡಿ ಕ್ರಮಾನುಗತವಾಗಿ ಚುಕ್ತಾ ಮಾಡುವುದು ಒಳಿತು.

Advertisement

5.    ಆರ್ಥಿಕ ಸಂಸ್ಥೆಗಳನ್ನು ಗೊತ್ತು ಮಾಡಿಕೊಳ್ಳಿ
ಯಾವ್ಯಾವ ಬ್ಯಾಂಕಿನಲ್ಲಿ ಖಾತೆ ಇದೆ. ಯಾವ್ಯಾವ ಕಂಪೆನಿಯ ಶೇರು ಹೊಂದಿದ್ದಾರೆ, ಡೀಮ್ಯಾಟ್‌ ಎಲ್ಲೆಲ್ಲಿ ಮಾಡಿದ್ದಾರೆ, ಯಾವ ವಿಮಾಕಂಪೆನಿಯಲ್ಲಿ ಇನ್ಸೂರೆನ್ಸ್‌ ಇದೆ -ಎಂಬುದನ್ನೆಲ್ಲಾ ಟ್ರಾಕ್‌ ಮಾಡಿ ದಾಖಲೆಗಳನ್ನು ಒಟ್ಟುಗೂಡಿಸಿ ಮುನ್ನಡೆಯಬೇಕಾಗುತ್ತದೆ. 

6.    ಖಾತೆಗಳ ವರ್ಗಾವಣೆ ಮಾಡುವಿಕೆ ಇಲ್ಲವೇ ಮುಚ್ಚುವಿಕೆ:
ಮೃತರು ಬಿಟ್ಟು ಹೋದ ಬ್ಯಾಂಕ್‌ ಖಾತೆಗಳಿಗೆ, ಶೇರುಗಳಿಗೆ ನಾಮನಿರ್ದೇಶನವಿದ್ದಲ್ಲಿ ಅದರಂತೆ ವರ್ಗಾವಣೆಯನ್ನು ಮಾಡಿಸಿಕೊಳ್ಳಬಹುದು. ಇಲ್ಲದೇ ಹೋದಲ್ಲಿ ಅದರ ವಿಲೇವಾರಿಗೆ ಕಾಗದಪತ್ರಗಳನ್ನು ಒಗ್ಗೂಡಿಸಿ, ಎಲ್ಲ ಹಕ್ಕುದಾರರನ್ನು ಒಂದೆಡೆ ಕಲೆಹಾಕ ಬೇಕಾಗುತ್ತದೆ.  ಒಂದುವೇಳೆ ಬ್ಯಾಂಕಿನಲ್ಲಿ ಜಂಟಿಖಾತೆ ಹೊಂದಿದ್ದು, ಆ ಪೈಕಿ ಒಬ್ಬರು ತೀರಿಕೊಂಡಿದ್ದರೆ, ಆ ಖಾತೆಯನ್ನು ಕ್ಲೋಸ್‌ ಮಾಡಿ ಹೊಸ ಖಾತೆ ತೆರೆಯಬೇಕಾಗುತ್ತದೆ.   ವಾಹನದ ದಾಖಲೆಗಳ ವರ್ಗಾವಣೆ, ಗ್ಯಾಸ್‌ ಕನೆಕ್ಷನ್‌, ನೀರಿನ ಸಂಪರ್ಕ, ವಿದ್ಯುತ್‌ ಸಂಪರ್ಕ, ದೂರವಾಣಿ ಸಂಪರ್ಕ ಹೀಗೆ ಅನೇಕ ಬಗೆಯ ದಾಖಲೆಗಳ ವರ್ಗಾವಣೆ, ಕ್ಲೋಷರ್‌ ಮಾಡಬೇಕಾಗುತ್ತದೆ. ಇದೆಲ್ಲವೂ ಒಬ್ಬ ವ್ಯಕ್ತಿ ಮೃತರಾದ ನಂತರ ಆಗಬೇಕಾದ ಜವಾಬ್ದಾರಿ. ಉತ್ತರವಾರಸುದಾರರು ಎಲ್ಲರೂ ಕ್ಲೈಮು ಮಾಡಲು ಆಗದೇ ಇದ್ದಲ್ಲಿ, ಒಬ್ಬರು ಕ್ಲೈಮಿಗೆ ಅರ್ಜಿ ಸಲ್ಲಿಸಿ, ಉಳಿದವರಿಂದ ಒಪ್ಪಿಗೆ ಪತ್ರ ಪಡೆಯಬಹುದು.  ಹೂಡಿಕೆಗಳಿದ್ದಲ್ಲಿ ಅವುಗಳ ವರ್ಗಾವಣೆಗೂ ಇದೇ ಪ್ರಕ್ರಿಯೆ ಅನ್ವಯವಾಗುತ್ತದೆ.

7.    ಇನ್‌ ಕಮ್‌ ಟ್ಯಾಕ್ಸ್‌ ರಿಟರ್ನ್
ಇದು ತುಂಬಾ ಅಗತ್ಯದ ಕೆಲಸ. ಅನೇಕ ಮಂದಿಗೆ ಇದು ಗೊತ್ತಿರುವುದಿಲ್ಲ. ಮಾಡಿರುವುದೂ ಇಲ್ಲ. ಮೃತರು ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ಸತ್ತುಹೋಗಿದ್ದರೆ, ಆ ದಿನಾಂಕದವರೆಗಿನ ಅವರ ವರಮಾನವನ್ನು ಲೆಕ್ಕಕ್ಕೆ ತೆಗೆದುಕೊಂಡು, ಅವರ ವಾರಸುದಾರರು ವರಮಾನ ತೆರಿಗೆ ಇಲಾಖೆಗೆ ಲೆಕ್ಕಸಲು ಅವಕಾಶವಿದೆ. ಮೃತರ ಪಾನ್‌ಕಾರ್ಡ್‌ ದಾಖಲೆ ಮತ್ತು ಇತರೆ ದಾಖಲೆಗಳನ್ನು ಒಟ್ಟುಗೂಡಿಸಿ ರಿಟರ್ನ್ ಸಲ್ಲಿಸಬೇಕಾಗುತ್ತದೆ. 

8.    ಮೃತರ ಹಿತಾಸಕ್ತಿ ಕಾಪಾಡಿ
ಮೃತರು ಬಿಟ್ಟು ಹೋಗಿರುವ ಎ.ಟಿ.ಎಂ. ಕಾರ್ಡುಗಳನ್ನು ಸರೆಂಡರ್‌ ಮಾಡುವುದು, ನಿಷ್ಕ್ರಿಯಗೊಳಿಸುವುದು, ಅವರ ಹೆಸರಿನಲ್ಲಿರುವ ಪಾನ್‌, ಆಧಾರ್‌ ಸಂಖ್ಯೆಗಳು ಬೇರಾರ ಕೈಗೂ ಸಿಗದಂತೆ ಸಂರಕ್ಷಿಸುವುದು, ಮೃತರ ಹೆಸರಿನ ದಾಖಲೆಗಳನ್ನು  ಬೇರೆಯವರು ದುರ್ಬಳಕೆ ಮಾಡುವುದನ್ನು ತಪ್ಪಿಸುವುದು ಇದೆಲ್ಲವೂ ಆಗಬೇಕಾದ ಕೆಲಸಗಳೇ. 

ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next