Advertisement

ನಕಲಿ ಖಾತೆಯಲ್ಲಿ 8 ಲಕ್ಷ ರೂ.

12:34 AM Feb 16, 2020 | Team Udayavani |

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ನೀಡ ಬೇಕಾಗಿದ್ದ ಹಣವನ್ನು ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಯ ಅಧೀನ ಅಧಿಕಾರಿಗಳು ಗುತ್ತಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ಮೂಲಕ 4.15 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸ್ಫೋಟಕ ವಿಷಯ ಬೆಳಕಿಗೆ ಬಂದಿವೆ.

Advertisement

4.15 ಕೋಟಿ ರೂ.ನಲ್ಲಿ ಈಗ ನಕಲಿ ಖಾತೆಯಲ್ಲಿ 8 ಲಕ್ಷ ರೂ. ಮಾತ್ರ ಉಳಿದಿದೆ. ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಲೆಕ್ಕ ಅಧೀಕ್ಷಕರಾದ ಅನಿತಾ ಮತ್ತು ರಾಮಮೂರ್ತಿ ಹಾಗೂ ಇದೇ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಎಂಬವರು ಚಂದ್ರಪ್ಪ ಎಂಬ ಗುತ್ತಿಗೆದಾರರ ಹೆಸರಿನಲ್ಲಿ ಹಂಪಿನಗರದ ಜನತಾ ಕೋ-ಆಪ ರೇಟಿವ್‌ ಬ್ಯಾಂಕ್‌ನಲ್ಲಿ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ, ಮಹದೇವಪುರ ವಲಯದಲ್ಲಿ 4.15 ಕೋಟಿ ರೂ. ವಂಚನೆ ಮಾಡಿದ್ದರು.

ಬಿಬಿಎಂಪಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರ ಚಂದ್ರಪ್ಪ ಎಂಬವರ ಖಾತೆಗೆ ಜಮಾ ಮಾಡಬೇಕಾಗಿದ್ದ 4.15 ಕೋಟಿ ರೂ.ಗಳನ್ನು ತಾವು ಸೃಷ್ಟಿಸಿದ ನಕಲಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಹಣ ವರ್ಗಾವಣೆ ಮಾಡಲು ಬ್ಯಾಂಕ್‌ ಖಾತೆಗೆ ನಕಲಿ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಸಹ ಬಳಸಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು, ಆರೋಪಿಗಳ ಮೇಲೆ ಫೆ. 12 ರಂದು ಬಿಎಂಟಿಎಫ್ನಲ್ಲಿ ದೂರು ದಾಖಲಿಸಿದ್ದು, ಬಿಬಿಎಂಪಿ ಆಯುಕ್ತರಾದ ಬಿ.ಎಚ್‌.ಅನಿಲ್‌ಕುಮಾರ್‌, ಈ ಮೂವರನ್ನು ಅಮಾನುಗೊಳಿಸಿ ಆದೇಶಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೂವ ಬಿಎಂಟಿಎಫ್ ಪೊಲೀಸರು ಲೆಕ್ಕ ಅಧೀಕ್ಷಕರಾದ ಅನಿತಾ ಮತ್ತು ರಾಮಮೂರ್ತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ತಲೆ ಮರಸಿಕೊಂಡಿರೂವ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರಗಾಗಿ ಬಲೆ ಬೀಸಿದ್ದಾರೆ.

8 ಲಕ್ಷರೂ. ಮಾತ್ರ ಖಾತೆಯಲ್ಲಿದೆ: ಜನತಾ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಸೃಷ್ಟಿಸಿದ 4.15 ಕೋಟಿ ರೂ.ನಲ್ಲಿ ಸದ್ಯ 8 ಲಕ್ಷ ರೂ. ಮಾತ್ರ ಇದೆ. ಗಂಗಾಧರ್‌ ಹಾಗೂ ನಾಗೇಶ್‌ ಎಂಬವರ ಹೆಸರಿನಲ್ಲಿ 1.75 ಕೋಟಿ ರೂ. ಮೊತ್ತದ ಡಿಡಿ ಮಾಡಿಸಲಾಗಿದ್ದು, ಡಿಡಿ ಮೊತ್ತ ಪಾವತಿಯಾಗುವ ಅದನ್ನು ತಡೆಹಿಡಿಯಲಾಗಿದೆ. ಇನ್ನು ಫೆ.3 ರಿಂದ ಒಂದು ವಾರ ನಕಲಿ ಖಾತೆಯಿಂದ 2.40 ಕೋಟಿ ರೂ. ನಗದು ಡ್ರಾ ಮಾಡಲಾಗಿದೆ ಎಂದು ಬಿಎಂಟಿಎಫ್ನ ಪೊಲೀಸ್‌ ವರಿಷ್ಠಾಧಿಕಾರಿ ಓಬಳೇಶ್‌ ಮಾಹಿತಿ ನೀಡಿದ್ದಾರೆ.

Advertisement

ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಗೆ ಸಂಬಂಧಿಸಿದಂತೆ ನೀಡಿರೂವ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸೇರಿದಂತೆ ಎಲ್ಲ ದಾಖಲೆಗಳು ನಕಲಿ ಎಂಬುದು ಮೇಲ್ನೋಟ್ಟಕ್ಕೆ ಕಂಡುಬಂದಿದ್ದು, ಈ ಸಂಬಂಧ ಬ್ಯಾಂಕ್‌ಗೂ ನೋಟಿಸ್‌ ಜಾರಿ ಮಾಡಿಲಾಗಿದೆ. ಇದೇ ರೀತಿ ನಗರದ ಬೇರೆ ಬ್ಯಾಂಕ್‌ಗಳಲ್ಲಿಯೂ ನಕಲಿ ದಾಖಲೆ ಸೃಷ್ಟಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ತಮಿಳುನಾಡಿನಲ್ಲಿ ಇರುವ ಸಾಧ್ಯತೆ: ಈ ಹಗರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳಿಗೆ ತಮಿಳುನಾಡಿನಲ್ಲಿ ಹುಡು ಕಾಟ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳು ತಮಿಳುನಾಡಿ ನಲ್ಲಿ ತಲೆ ಮರೆಸಿಕೊಂಡಿರುವ ಖಚಿತ ಮಾಹಿತಿಯ ಮೇರೆಗೆ ತಮಿಳುನಾಡಿನಲ್ಲಿ ಬಿಎಂಟಿಎಫ್ ಪೊಲೀಸರೂ ಹುಡುಕಾಟ ನಡೆಸುತ್ತಿದ್ದಾರೆ. ಸೋಮವಾರದೊಳಗೆ ಚಂದ್ರಪ್ಪ ಮತ್ತು ನಾಗೇಶ್‌ ಅವರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ ಎಂದು ಓಬಳೇಶ್‌ ತಿಳಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ವಿಚಾರಣೆ: ಹೆಚ್ಚಿನ ವಿಚಾರಣೆಗೆ ಅನಿತಾ ಮತ್ತು ರಾಮಮೂರ್ತಿ ಅವರನ್ನು ಫೆ.24ರವರೆಗೆ ಬಿಎಂಟಿಎಫ್ ವಶಕ್ಕೆ ನೀಡಿದೆ. ಶನಿವಾರ ಅನಿತಾ ಮತ್ತು ರಾಮಮೂರ್ತಿ ಅವರನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಮುಖ್ಯಲೆಕ್ಕಾಧಿಕಾರಿ ಕಚೇರಿಗೆ ಕರೆ ತಂದು ವಿಚಾರಣೆ ನಡೆಸಲಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಕೆಲವು ಅಧಿಕಾರಿಗಳ ವಿಚಾರಣೆಗೆ ಮಾತ್ರ ನೋಟಿಸ್‌ ಜಾರಿ ಮಾಡಲಾಗಿದೆ.
-ಓಬಳೇಶ್‌, ಬಿಎಂಟಿಎಫ್ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next