ಬೆಂಗಳೂರು: ರಾಜ್ಯ, ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ ಎಂಬಂತೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ 13 ಮಂದಿ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ಅನುಪಸ್ಥಿತಿಯಲ್ಲಿಯೇ ಸ್ಪೀಕರ್ ಕಾರ್ಯದರ್ಶಿಗೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.
ನಾನು ಅತೃಪ್ತರ ಗುಂಪಿನಲ್ಲಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಬೇಸರವಿಲ್ಲ. ತಾರತಮ್ಯದ ಬಗ್ಗೆ ಬೇಸರವಿದೆ ಎಂದ ರಾಮಲಿಂಗಾರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮುನಿರತ್ನ ರಾಜರಾಜೇಶ್ವರಿ ನಗರ ಶಾಸಕ, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಕೂಡಾ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದಾರೆ.
13 ಮಂದಿ ಶಾಸಕರು ರಾಜೀನಾಮೆ ನೀಡುವ ವಿಚಾರ ಬರೇ ವದಂತಿ. ಇದನ್ನೆಲ್ಲಾ ನಂಬಬೇಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಕೊಟ್ಟ ಬೆನ್ನಲ್ಲೇ 13 ಮಂದಿ ಬಂಡಾಯ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ನ ಆನಂದ್ ಸಿಂಗ್ ಈಗಾಗಲೇ ರಾಜೀನಾಮೆ ನೀಡಿದ್ದು, ಒಟ್ಟು 15 ಮಂದಿ ಶಾಸಕರು ರಾಜೀನಾಮೆ ನೀಡಿದಲ್ಲಿ ಸರ್ಕಾರ ಪತನ ಖಚಿತ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಜೆಡಿಎಸ್ ನ ಎಚ್.ವಿಶ್ವನಾಥ್, ಗೋಪಾಲಯ್ಯ, ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಪ್ರತಾಪ ಗೌಡ ಪಾಟೀಲ್ ಮಸ್ಕಿ ಸೇರಿದಂತೆ ಕಾಂಗ್ರೆಸ್ ನ 10 ಹಾಗೂ ಜೆಡಿಎಸ್ ನ 3 ಶಾಸಕರು ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ.