ಪಾಟ್ನಾ: ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಜೆ ವಾಹನಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಎಂಟು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಬಿಹಾರದ ಸುಲ್ತಾನ್‌ಪುರ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ.
ಮೃತರು ಹಾಜಿಪುರದ ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನಪುರ ಗ್ರಾಮದ ನಿವಾಸಿಗಲೆಂದು ಹೇಳಲಾಗಿದೆ
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಹುಡುಗರು ಪ್ರತಿ ಸೋಮವಾರ ಸಮೀಪದ ಹರಿಹರನಾಥ ದೇವಸ್ಥಾನಕ್ಕೆ ಜಲಾಭಿಷೇಕ ಮಾಡಲು ಮೆರವಣಿಗೆ ಮೂಲಕ ತೆರಳುತ್ತಿದ್ದರು ಈ ವೇಳೆ ಯುವಕರ ತಂಡ ಟ್ರ್ಯಾಕ್ಟರ್-ಟ್ರಾಲಿಗೆ ದೊಡ್ಡ ದೊಡ್ಡ ಸೌಂಡ್ ಬಾಕ್ಸ್ ಅಳವಡಿಸಿ ಡಿಜೆ ವ್ಯವಸ್ಥೆ ಮಾಡಿದ್ದರು ಅಲ್ಲದೆ ಇದು ತುಂಬಾ ಎತ್ತರವಾಗಿದ್ದ ಪರಿಣಾಮ ರಸ್ತೆಯಲ್ಲಿದ್ದ ಹೈಟೆನ್ಷನ್ ತಂತಿಗೆ ತಗುಲಿದೆ ಪರಿಣಾಮ ಎಂಟು ಭಕ್ತರು ಸಾವನ್ನಪ್ಪಿದ್ದಾರೆ, ಗಾಯಗೊಂಡ ಭಕ್ತರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಸಲು ಮೆರವಣಿಗೆ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನದಲ್ಲಿ ಅಳವಡಿಸಿದ್ದ ಧ್ವನಿ ವರ್ಧಕಗಳನ್ನು ಎತ್ತರವಾಗಿ ಜೋಡಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.