ಹುಬ್ಬಳ್ಳಿ: ಸರಕಾರಿ ನೌಕರರಿಗೆ ಮಿನಿ ವಿಧಾನಸೌಧದಲ್ಲಿ 8 ದಿನಗಳ ಯೋಗ ತರಬೇತಿ ಶಿಬಿರ ಆಯೋಜಿಸುವುದಾಗಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರಿ ನೌಕರರು ನಿರಂತರ ಕಚೇರಿ ಕೆಲಸದಲ್ಲಿ ಮುಳುಗಿದ್ದು, ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇದರಿಂದಾಗಿ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಚೇರಿ ಕೆಲಸದ ಒತ್ತಡದಲ್ಲಿ ಅವರ ಮಾನಸಿಕ ಸ್ವಾಸ್ಥ್ಯವೂ ಹದಗೆಡುತ್ತದೆ. ನೌಕರರಿಗಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ತರಬೇತಿ ಶಿಬಿರ ಆಯೋಜಿಸಲಾಗುವುದು ಎಂದರು.
ಜೂ. 10ರಿಂದ ಸಂಜೆ 5:30ರ ನಂತರ ಹುಬ್ಬಳ್ಳಿ ಮಿನಿವಿಧಾನ ಸೌಧದಲ್ಲಿ ನೌಕರರಿಗೆ ಯೋಗ ತರಬೇತಿ ನೀಡಲಾಗುವುದು. ಅತ್ಯುತ್ತಮವಾಗಿ ತರಬೇತಿ ಪಡೆದ ನೌಕರರಿಗೆ ತಾಪಂ ಹಾಗೂ ತಾಲೂಕಾಡಳಿತ ವತಿಯಿಂದ ಜೂ.21ರಂದು ಸನ್ಮಾನಿಸಲಾಗುವುದು ಎಂದು ಹೇಳಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಜುನಾಥ ಮಾತನಾಡಿ, ಸಂಸ್ಥೆಯಿಂದ ಹುಬ್ಬಳ್ಳಿಯಲ್ಲಿ 36 ಕೇಂದ್ರ ತೆರೆದು ಉಚಿತವಾಗಿ ಯೋಗ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.
ತಾಪಂ ಇಒ ಎಂ.ಎಂ. ಸವದತ್ತಿ, ಅಪರ ತಹಶೀಲ್ದಾರ್ ಪ್ರಕಾಶ ನಾಸಿ ಇನ್ನಿತರರಿದ್ದರು.