ಆನೇಕಲ್: ತಾಲೂಕಿನಲ್ಲಿ ಒಂದೇ ದಿನ 7 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಬೊಮ್ಮಸಂದ್ರದಲ್ಲಿ 5 ಪ್ರಕರಣ, ಅತ್ತಿಬೆಲೆ, ಆನೇಕಲ್ ಪಟ್ಟಣದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗುವುದರ ಮೂಲಕ ಇದೇ ಮೊದಲ ಬಾರಿ ತಾಲೂಕಿನ ಏಳು ಪ್ರಕರಣಗಳು ಒಂದೇ ದಿನ ದಾಖಲಾಗಿ ಸ್ಥಳೀಯರಲ್ಲಿ ಆತಂಕ ಮೂಡಿದೆ.
ತಾಲೂಕಿನ ಬೊಮ್ಮಸಂದ್ರದ ಆರ್.ಎಸ್.ಗಾಡೇನಿಯಾದಲ್ಲಿ 5 ಪ್ರಕರಣಗಳು ಪತ್ತೆಯಾಗಿದ್ದು, 10 ವರ್ಷದ ಮಗುವಿಗೂ ಕೋವಿಡ್ 19 ತಗುಲಿದೆ. ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸ ತೊಡಗಿದ್ದಾರೆ. ಇದೇ ಭಾಗದಲ್ಲಿ ಹಿಂದೆ ಎರಡು ಪ್ರಕರಣಗಳು ಪತ್ತೆಯಾಗಿತ್ತು. ಇಲ್ಲಿನವರು ತಮಿಳುನಾಡಿನಿಂದ ಬಂದವರಿಂದ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ.
ಅದರ ಜೊತೆಗೆ ಪಟ್ಟಣದಲ್ಲಿ 40 ವರ್ಷ ವಯಸ್ಸಿನ ವ್ಯಕ್ತಿಗೂ ಕೋವಿಡ್ 19 ಪಾಸಿಟಿವ್ ಬಂದಿದೆ. ಈತ ನಾರಾಯಣ ಹೃದಯಾಲಯದಲ್ಲಿ ಕೆಲಸ ಮಾಡುತ್ತ ಸಂಜೆ ವೇಳೆ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪಟ್ಟಣದ ವೀವರ್ ಕಾಲೋನಿಯಲ್ಲಿ ಈಗಾಗಲೆ ಸೀಲ್‌ಡೌನ್ ಮಾಡಲಾಗಿತ್ತು. ಸೋಂಕಿನ ಸಂಪರ್ಕದಲ್ಲಿದ್ದ ನಾಲ್ವರನ್ನು ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದಿನಸಿ ವರ್ತಕನಿಗೆ ಸೋಂಕು ದೃಢ
ವಿಜಯಪುರ: ಪಟ್ಟಣದಲ್ಲಿ ಮತ್ತೂಂದು ಕೋವಿಡ್ 19 ಸೋಂಕು ದೃಢಪಟ್ಟಿದ್ದು, ತಾಲೂಕಿನಲ್ಲಿ ಇದು 5ನೇ ಪ್ರಕರಣವಾಗಿದೆ. ವಿಜಯಪುರದ ಗಾಂಧಿ ಚೌಕದಲ್ಲಿ ದಿನಸಿ ವರ್ತಕರಾಗಿದ್ದ ಹಾಗೂ ಜೆಸಿ ಬಡಾವಣೆ ನಿವಾಸಿ 45 ವರ್ಷದ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್ ಇರುವುದು ಧೃಡಪಟ್ಟಿದೆ.
ಮನೆಯಲ್ಲಿ 4 ಜನರಿದ್ದು ಪತ್ನಿಗೂ ರೋಗ ಲಕ್ಷಣಗಳು ಕಾಣಿಸಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ವಿಜಯಪುರ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ವಿಜಯಪುರದ 2ನೇ ಪ್ರಕರಣ ದಿನಸಿ ವ್ಯಾಪಾರಿಯ ನಂಟಿನಿಂದ ಸೋಂಕು ಉಂಟಾಗಿರುವ ಸಾಧ್ಯತೆಗಳಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ತಿಳಿಸಿದರು.