ನವದೆಹಲಿ: ಜಂಜಿಬಾರ್ ದ್ವೀಪಸಮೂಹದ ಪೆಂಬಾ ದ್ವೀಪದಲ್ಲಿ ಸಮುದ್ರ ಆಮೆ ಮಾಂಸವನ್ನು ಸೇವಿಸಿದ ನಂತರ 8 ಮಕ್ಕಳು ಮತ್ತು ವಯಸ್ಕರೊಬ್ಬರು ಸಾವನ್ನಪ್ಪಿರುವುದಾಗಿ ಮೆಟ್ರೋ ದೈನಿಕ ವರದಿ ಮಾಡಿದೆ.
ಇದನ್ನೂ ಓದಿ:Loksabha; ಕಾಂತೇಶ್ ಗೆ ಟಿಕೆಟ್ ತಪ್ಪುವ ಸಾಧ್ಯತೆ; ಶಿವಮೊಗ್ಗದಲ್ಲಿ ಸೋಶಿಯಲ್ ಮೀಡಿಯಾ ವಾರ್
ಮಾರ್ಚ್ 5ರಂದು ಈ ಘಟನೆ ನಡೆದಿದ್ದು, ಆಮೆ ಮಾಂಸ ಸೇವಿಸಿದ್ದ ಸುಮಾರು 78 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಹಾಜಿ ಬಕಾರಿ ತಿಳಿಸಿದ್ದಾರೆ.
ಗಮನಾರ್ಹ ವಿಷಯ ಏನೆಂದರೆ ಕಡಲಾಮೆ ಮಾಂಸ ಫುಡ್ ಪಾಯಿಸನ್ ಅಪಾಯ ತಂದೊಡ್ಡಲಿದೆ ಎಂದು ತಿಳಿದಿದ್ದರೂ ಕೂಡಾ ಆಮೆ ಮಾಂಸ ರುಚಿಯಾದ ಖಾದ್ಯ ಎಂದು ಈ ಪ್ರದೇಶದಲ್ಲಿ ಪರಿಗಣಿಸಿರುವುದಾಗಿ ವರದಿಯಾಗಿದೆ.
ಕಡಲಾಮೆ ಮಾಂಸ ಸರಿಸುಮಾರು ಬೊಂಡಾಸ್ ಅಥವಾ ಅಲಿಗೇಟರ್ ಹೋಲಿಕೆಯ ಗೋಮಾಂಸದ ರುಚಿಯನ್ನು ಹೊಂದಿರುತ್ತದೆ ಎನ್ನಲಾಗಿದೆ. ವೈದ್ಯಾಧಿಕಾರಿ ಡಾ.ಬಕಾರಿ ಪ್ರಕಾರ, ಪ್ರಯೋಗಾಲಯದ ಪರೀಕ್ಷೆಯಲ್ಲಿ ಕಡಲಾಮೆ ತಿಂದ ಪರಿಣಾಮ ಈ ಅನಾಹುತ ಸಂಭವಿಸಿರುವುದಾಗಿ ತಿಳಿಸಿದ್ದಾರೆ.
ಚೆಲೋನಿಟಾಕ್ಸಿಸಮ್ ಎಂದು ಕರೆಯಲ್ಪಡುವ ಒಂದು ರೀತಿಯ ಆಹಾರ ವಿಷದ ಕಾರಣ ಆಮೆ ಮಾಂಸ ವಿಷಕಾರಿ ಎಂದು ವರದಿ ತಿಳಿಸಿದೆ. ಮಕ್ಕಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬಹುತೇಕ ಕಡಲಾಮೆ ತಿಂದ ಪರಿಣಾಮ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ ಎಂದು ಟರ್ಟಲ್ ಫೌಂಡೇಶನ್ ಚಾರಿಟಿ ತಿಳಿಸಿದೆ.