ನವದೆಹಲಿ: ಗುಜರಾತ್ ನ ಅಹಮದಾಬಾದ್ ನ ವಿವಿಧ ಪ್ರದೇಶಗಳಲ್ಲಿ “ಮೋದಿ ಹಠಾವೋ, ದೇಶ್ ಬಚಾವೋ” ಎಂಬ ಪೋಸ್ಟರ್ ಗಳನ್ನು ಅಂಟಿಸಿದ ಆರೋಪದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರವ್ಯಾಪಿ ಪೋಸ್ಟರ್ ಅಭಿಯಾನ ಆರಂಭಿಸಿದ ಕೇವಲ ಒಂದು ದಿನದ ನಂತರ ಈ ಬಂಧನ ನಡೆದಿರುವುದಾಗಿ ವರದಿ ತಿಳಿಸಿದೆ.
ಅಹಮದಾಬಾದ್ ಪೊಲೀಸರ ಮಾಹಿತಿ ಪ್ರಕಾರ, ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಂಟಿಸಿದ್ದ ಆರೋಪದ ಮೇಲೆ ಬಂಧಿತರಾದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ (AAP)ದ “ಮೋದಿ ಹಠಾವೋ, ದೇಶ್ ಬಚಾವೋ” ಅಭಿಯಾನದ ಹಿನ್ನೆಲೆಯಲ್ಲಿ ದೇಶಾದ್ಯಂತ 11 ಭಾಷೆಗಳಲ್ಲಿ ಪೋಸ್ಟರ್ ಅಭಿಯಾನ ಆರಂಭಿಸಿತ್ತು. ಇದರಲ್ಲಿ ಇಂಗ್ಲಿಷ್, ಹಿಂದಿ ಮತ್ತು ಉರ್ದು ಸೇರಿದಂತೆ ಗುಜರಾತಿ, ಪಂಜಾಬಿ, ತೆಲುಗು, ಬಂಗಾಳಿ, ಒರಿಯಾ, ಕನ್ನಡ, ಮಲಯಾಳಂ ಮತ್ತು ಮರಾಠಿ ಭಾಷೆಯಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು.
ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿಯೂ ಬ್ರಿಟಿಷರ್ ವಿರುದ್ಧ ಪೋಸ್ಟರ್ ಅಂಟಿಸಿದವರನ್ನು ಬಂಧಿಸಿರಲಿಲ್ಲವಾಗಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮುಖಂಡರ ಬಂಧನದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.