ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಮಂಗಳವಾರ (ಡಿ. 31) ಇಡೀ ದಿನ 8.59 ಲಕ್ಷ ಜನ ಪ್ರಯಾ ಣಿಸಿದ್ದು, ಇದು ನಿತ್ಯದ ಮೆಟ್ರೋ ಪ್ರಯಾಣಿಕರ ಸರಾಸರಿಯೇ ಆಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್)ವು ಮೆಟ್ರೋ ಸೇವೆಯನ್ನು 3 ತಾಸು ವಿಸ್ತರಿಸಲಾಗಿತ್ತು. ಅಂದರೆ ಸಾಮಾನ್ಯ ದಿನಗಳಲ್ಲಿ ಕೊನೆಯ ಮೆಟ್ರೋ ರೈಲು ನಾಲ್ಕೂ ಟರ್ಮಿನಲ್ ಗಳಿಂದ ರಾತ್ರಿ 11 ಗಂಟೆಗೆ ಹೊರಡುತ್ತವೆ. ಹೊಸ ವರ್ಷದ ಸಂಭ್ರಮಾಚರಣೆ ಇದ್ದುದರಿಂದ ಬುಧವಾರ ಬೆಳಗಿನಜಾವ 2 ಗಂಟೆಗೆ ಕೊನೆಯ ರೈಲುಗಳು ನಿರ್ಗಮಿಸಿವೆ. ಆದರೆ, ಪ್ರಯಾಣಿಕರ ಸಂಖ್ಯೆ ಮಾತ್ರ ಎಂದಿನಂತೆಯೇ ಇರುವುದು ಕಂಡುಬಂದಿದೆ.
ಒಟ್ಟಾರೆ 8.59 ಲಕ್ಷದಲ್ಲಿ ನೇರಳೆ ಮಾರ್ಗ ದಲ್ಲಿ 4,00,583, ಹಸಿರು ಮಾರ್ಗದಲ್ಲಿ 2,90,530 ಮತ್ತು ಕೆಂಪೇಗೌಡ ನಿಲ್ದಾಣದಿಂದ 1,62,931 ಹಾಗೂ ಪೇಪರ್ ಟಿಕೆಟ್ ಪಡೆದು 5,423 ಜನ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಟ್ರೋ ನಿತ್ಯದ ಸರಾಸರಿ ಪ್ರಯಾಣಿಕರ ಸಂಖ್ಯೆ 8.50 ಲಕ್ಷ ಇದೆ. ಡಿಸೆಂಬರ್ 6ರಂದು ಮೆಟ್ರೋದಲ್ಲಿ ಹಿಂದೆಂದಿಗಿಂತ ಗರಿಷ್ಠ ಸಂಖ್ಯೆಯ ಅಂದರೆ 9.20 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಅಂದು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು, ಅವರಲ್ಲಿ ಬಹುತೇಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ದಾಖಲೆ ಪ್ರಯಾಣ ಆಗಿರಬಹುದು ಎಂದು ಬಿಎಂಆರ್ಸಿಎಲ್ ಅಂದಾಜಿಸಿತ್ತು.