ಹೊಸದಿಲ್ಲಿ : ಏಳನೇ ವೇತನ ಆಯೋಗ ಶಿಫಾರಸು ಮಾಡಿರುವ ಹೆಚ್ಚಿಸಲ್ಪಟ್ಟ ಪರಿಷ್ಕೃತ ಭತ್ಯೆಯನ್ನು ಪಡೆಯಲು ತುದಿಗಾಲಲ್ಲಿ ಕಾಯುತ್ತಿರುವ ಕೇಂದ್ರ ಸರಕಾರಿ ನೌಕರರು ಮುಂದಿನ ಜುಲೈ ತಿಂಗಳಿಂದ ಈ ಭತ್ಯೆಯನ್ನು ಪಡೆಯಲಿದ್ದಾರೆ ಎಂದು ಆರ್ಥಿಕ ಸಮಾಚಾರದ ದೈನಿಕವೊಂದು ವರದಿ ಮಾಡಿದೆ.
ಜುಲೈ ತಿಂಗಳಿಂದ ಕೇಂದ್ರ ಸರಕಾರ ತನ್ನ ನೌಕರರಿಗೆ ಎಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ) ಸಹಿತ ಪರಿಷ್ಕತ ಭತ್ಯೆಯನ್ನು ಕೇಂದ್ರ ಸರಕಾರ ತನ್ನ ನೌಕರರಿಗೆ ನೀಡಲಿದೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಈ ಸಂಬಂಧವಾಗಿ ಕೇಂದ್ರ ಸಚಿವ ಸಂಪುಟವು ಈ ವಾರ ಅತ್ಯಂತ ಮಹತ್ವದ ಸಭೆಯೊಂದನ್ನು ನಡೆಸಲಿದ್ದು 7ನೇ ವೇತನ ಆಯೋಗದ ಶಿಫಾರಸನ್ನು ಆಧರಿಸಿದ ಎಚ್‌ಆರ್‌ಎ ಮತ್ತು ಪರಿಷ್ಕೃತ ಭತ್ಯೆಯ ಕುರಿತು ಚರ್ಚೆ ನಡೆಸಲಿದೆ.
ಕಾರ್ಯದರ್ಶಿಗಳ ದತ್ತಾಧಿಕಾರ ಸಮಿತಿಯು ಕಳೆದ ಶುಕ್ರವಾರದಂದು ಪರಿಷ್ಕೃತ ಭತ್ಯೆ ಕುರಿತಾದ ತನ್ನ ಅಂತಿಮ ವರದಿಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದೆ.
ಎಕ್ಸ್, ವೈ ಮತ್ತು ಝಡ್ ವರ್ಗದ ನಗರಗಳಿಗೆ ಅನ್ವಯವಾಗುವಂತೆ ಎಚ್‌ಆರ್‌ಎ ಯನ್ನು ಮೂಲ ವೇತನದ ಶೇ.24, ಶೇ.16 ಮತ್ತು ಶೇ.8ರ ಪ್ರಮಾಣದಲ್ಲಿ ನಿಗದಿಸಬೇಕೆಂಬ ಎ ಕೆ ಮಾಥುರ್ ಮಂಡಳಿಯ ಅಭಿಪ್ರಾಯವನ್ನು ಕಾರ್ಯದರ್ಶಿಗಳ ದತ್ತಾಧಿಕಾರ ಸಮಿತಿಯು ಬೆಂಬಲಿಸಿರುವುದಾಗಿ ತಿಳಿದು ಬಂದಿದೆ.
ಆ ಪ್ರಕಾರ ಶೇ.50 ಡಿಎ ದಾಟಿದ ಸಂದರ್ಭಗಳಲ್ಲಿ ನಗರ ವರ್ಗಗಳಿಗೆ ಅನುಕ್ರಮವಾಗಿ ಎಚ್‌ಆರ್‌ಎ ಯನ್ನು ಶೇ.27, ಶೇ.18 ಮತ್ತು ಶೇ.9ರ ಮಟ್ಟದಲ್ಲಿ ಪರಿಷ್ಕರಿಸಲಾಗುವುದು. ಅದೇ ರೀತಿ ಡಿಎ ಶೇ.100 ದಾಟಿದ ಸಂದರ್ಭದಲ್ಲಿ ಎಚ್‌ಆರ್‌ಎ ನಗರ ವರ್ಗಗಳಿಗೆ ಅನುಕ್ರಮವಾಗಿ ಶೇ.30, ಶೇ.20 ಮತ್ತು ಶೇ.10ರ ಮಟ್ಯದಲ್ಲಿ ನಿಗದಿಸಲಾಗುವುದು.