Advertisement
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಶಿಕ್ಷಣ ಸಚಿವರು ಬಂಟ್ವಾಳ ನಿರೀಕ್ಷಣ ಮಂದಿರದಲ್ಲಿ “ಉದಯವಾಣಿ’ ಜತೆ ಮಾತನಾಡಿದರು. ಇನ್ನುಳಿದ ಕಡಿಮೆ ಅವಧಿಯಲ್ಲಿ ಪಬ್ಲಿಕ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಧ್ಯವೇ, ನಮ್ಮ ಮಕ್ಕಳಲ್ಲಿ ಅದನ್ನು ಎದುರಿಸುವಷ್ಟು ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲಿ ಮಕ್ಕಳನ್ನು ಪಾಸು-ಫೇಲ್ ಮಾಡುವ ಬದಲು ಅವರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುವ ಅನುಭವ ನೀಡುವ ಉದ್ದೇಶ ಇದೆ. ಹೀಗಾಗಿ ಸಿದ್ಧತೆ, ಸಾಮರ್ಥ್ಯದ ವಿಚಾರ ಬರುವುದಿಲ್ಲ ಎಂದರು.
ಪರೀಕ್ಷೆ ಅಂದರೆ ಹೇಗಿರುತ್ತದೆ, ಪರೀಕ್ಷಾ ಕೊಠಡಿಯ ವಾತಾವರಣ ಹೇಗಿರುತ್ತದೆ ಎಂಬುದು ಮಕ್ಕಳ ಅನುಭವಕ್ಕೆ ಬರಬೇಕು ಎಂಬ ಉದ್ದೇಶದಿಂದ ಈ ಯೋಚನೆ ಮಾಡಲಾಗಿದೆ. ಎಸೆಸೆಲ್ಸಿಯಂತಹ ಪ್ರಮುಖ ಹಂತದಲ್ಲಿ ಅವರು ಗಲಿಬಿಲಿಗೊಳ್ಳದಂತೆ ಅವರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುವ ಅನುಭವ ಇರಬೇಕು ಎನ್ನುವುದು ಮಾತ್ರ ನಮ್ಮ ಉದ್ದೇಶ ಎಂದರು. ಆದರೆ ಅದಕ್ಕೂ ಒಂದಷ್ಟು ಮಂದಿ ತಕರಾರು ಮಾಡಿದ್ದಾರೆ. ಅವರ ಜತೆ ಸಾಕಷ್ಟು ಚರ್ಚೆ ನಡೆಸಿ, ಅವರ ಮನವೊಲಿಸುವ ಕಾರ್ಯವನ್ನೂ ಮಾಡಿದ್ದೇವೆ. ಇನ್ನು 3 ದಿನಗಳಲ್ಲಿ ಪಬ್ಲಿಕ್ ಪರೀಕ್ಷೆಯ ಕುರಿತು ಸ್ಪಷ್ಟ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ. ಪಬ್ಲಿಕ್ ಪರೀಕ್ಷೆಯನ್ನು ನಡೆಸುವ ತೀರ್ಮಾನಕ್ಕೆ ಬಂದರೂ ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು. ಚುನಾವಣಾಧಿಕಾರಿಗೆ ಪತ್ರ
ಶಾಲಾ ಶಿಕ್ಷಕರಿಗೆ ಚುನಾವಣೆ- ತರಬೇತಿಗಳಿಂದ ಪಾಠಕ್ಕೆ ತೊಂದರೆ ಯಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಕ್ಷಕರನ್ನು ಚುನಾವಣ ಕರ್ತವ್ಯದಿಂದ ಮುಕ್ತಿ ಗೊಳಿಸಬೇಕು ಎಂದು ತಾನು ಈಗಾಗಲೇ ಚುನಾವಣ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಉತ್ತರ ಬರಬೇಕಿದೆ. ಶಿಕ್ಷಕರ ಮೇಲಿನ ಇತರ ಹೊರೆಗಳನ್ನೂ ಕಡಿಮೆ ಮಾಡುವ ಕುರಿತಾಗಿಯೂ ಯೋಚನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮತ್ತೆ ಮತ್ತೆ ತರಬೇತಿ ಇಲ್ಲ ಶಿಕ್ಷಕರಿಗೆ ಏನೇ ತರಬೇತಿ ನೀಡುವುದಾದರೂ ವಿದ್ಯಾರ್ಥಿಗಳ ಪಾಠ, ಪರೀಕ್ಷೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಡಿಸೆಂಬರ್ ಒಳಗೆ ಮುಗಿಸುವಂತೆ ತಿಳಿಸಲಾಗಿದೆ. ಜತೆಗೆ ಮತ್ತೆ ಮತ್ತೆ ತರಬೇತಿ, ಮೀಟಿಂಗ್‌ಗಳನ್ನು ಕರೆಯಬಾರದು ಎಂಬ ಸೂಚನೆಯನ್ನೂ ನೀಡಿದ್ದೇನೆ. ಶಿಕ್ಷಕರು ಹೆಚ್ಚು ಹೆಚ್ಚು ಶಾಲೆಗಳಲ್ಲಿ ನಿಲ್ಲಬೇಕು, ತರಬೇತಿಗಳನ್ನು ಅವರ ವಿರಾಮದ ಸಮಯದಲ್ಲಿ ನಡೆಸಬೇಕು. ಡಿಸೆಂಬರ್ ಬಳಿಕ ಯಾವುದೇ ತರಬೇತಿ ಹಮ್ಮಿಕೊಳ್ಳಬಾರದು, ಆ ಬಳಿಕದ ಶಾಲಾವಧಿಯನ್ನು ಪೂರ್ತಿಯಾಗಿ ಶೈಕ್ಷಣಿಕ ಚುಟುವಟಿಕೆಗಳಿಗೆ ನೀಡಬೇಕು ಎಂಬ ನಿರ್ದೇಶನವನ್ನೂ ನೀಡಿದ್ದೇನೆ ಎಂದು ಶಿಕ್ಷಣ ಸಚಿವರು “ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.