Advertisement

7ನೇ ತರಗತಿ ಪಬ್ಲಿಕ್‌ ಪರೀಕ್ಷೆ: ದ.ಕ., ಉಡುಪಿಯ 42,442 ಮಕ್ಕಳು

10:19 PM Oct 21, 2019 | Sriram |

ಉಡುಪಿ: ಶಿಕ್ಷಣ ಇಲಾಖೆ ಈ ವರ್ಷದಿಂದ 7ನೇ ತರಗತಿಗೆ ಪ್ರಾಯೋಗಿಕವಾಗಿ ಪಬ್ಲಿಕ್‌ ಪರೀಕ್ಷೆ ಆರಂಭಿಸಲಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ 42,442 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

Advertisement

ಹಿಂದೆ ಈ ಪದ್ಧತಿ ಇತ್ತಾದರೂ 2004-05ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎಸೆಸೆಲ್ಸಿ ತಲು ಪುವ ವರೆಗೂ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ಹೇಗಿರುತ್ತದೆ, ಹೇಗೆ ಎದುರಿಸಬೇಕು ಎನ್ನುವ ಕಲ್ಪನೆ ಲಭಿಸುತ್ತಿರಲಿಲ್ಲ. ಈಗ ಇಲಾಖೆಯು 15 ವರ್ಷಗಳ ಬಳಿಕ ಮತ್ತೆ ಪುನರಾರಂಭಿಸಲು ಮುಂದಾಗಿದೆ. ಈ ಬಾರಿ ಉಡುಪಿಯಲ್ಲಿ 13,566 ಮತ್ತು ದ.ಕ.ದಲ್ಲಿ ಸುಮಾರು 28,876 ವಿದ್ಯಾರ್ಥಿಗಳು ಪಬ್ಲಿಕ್‌ ಪರೀಕ್ಷೆ ಬರೆಯಲಿದ್ದಾರೆ.

ಸೆಮಿಸ್ಟರ್‌ ಪದ್ಧತಿಗೆ ಬ್ರೇಕ್‌
ಹಲವು ವರ್ಷಗಳಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್‌ ಪದ್ಧತಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಮೌಖೀಕ 10 ಮತ್ತು ಲಿಖೀತ 40 ಅಂಕ ಸೇರಿದಂತೆ ಒಟ್ಟು 50 ಅಂಕಗಳ ಪರೀಕ್ಷೆಯಿತ್ತು.

ಈಗ ಶಿಕ್ಷಣ ಇಲಾಖೆ ಸೆಮಿಸ್ಟರ್‌ ಪದ್ಧತಿಗೆ ಬ್ರೇಕ್‌ ಹಾಕಿ ವಿಷಯವಾರು 100 ಅಂಕದ ವಾರ್ಷಿಕ ಪರೀಕ್ಷೆ ಮಾಡಲು ನಿರ್ಧಾರ ಮಾಡಿದೆ. ಆದರೆ ವರ್ಷದ ಮೊದಲರ್ಧದಲ್ಲಿ ಸೆಮಿಸ್ಟರ್‌ ಪದ್ಧತಿಯ ಅನುಸರಣೆ ಆಗಿದ್ದು, ಎರಡೂ ಜಿಲ್ಲೆಗಳಲ್ಲಿ ಮೊದಲ ಸೆಮಿಸ್ಟರ್‌ ಫ‌ಲಿತಾಂಶ ಸೆಪ್ಟಂಬರ್‌ನಲ್ಲಿ ಪ್ರಕಟವಾಗಿದೆ.

2,142 ಪ್ರಾಥಮಿಕ ಶಾಲೆಗಳು
ಉಡುಪಿ ಜಿಲ್ಲೆಯಲ್ಲಿ 362 ಸರಕಾರಿ, 173 ಅನುದಾನಿತ, 148 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 683 ಹಿ.ಪ್ರಾ. ಮತ್ತು ಪ್ರಾ. ಶಾಲೆಗಳಿವೆ. ದ.ಕನ್ನಡದಲ್ಲಿ 918 ಸರಕಾರಿ, 215 ಅನುದಾನಿತ, 326 ಅನುದಾನಿತ ರಹಿತ ಪ್ರಾಥಮಿಕ ಶಾಲೆಗಳಿವೆ.

Advertisement

ಅನುಭವಕ್ಕಾಗಿ ಪರೀಕ್ಷೆ
ಈ ಬಾರಿ ಅನುಭವಕ್ಕಾಗಿ, ಪ್ರಾಯೋಗಿಕವಾಗಿ ಪಬ್ಲಿಕ್‌ ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭದಿಂದಲೇ ಮಕ್ಕಳು ತಯಾರಿ ಮಾಡಬೇಕಾಗಿದೆ.

ಸುತ್ತೋಲೆ ಬಂದಿಲ್ಲ
ಶಿಕ್ಷಣ ಇಲಾಖೆಯಿಂದ ಎರಡೂ ಜಿಲ್ಲೆಗಳ ಡಿಡಿಪಿಐ ಕಚೇರಿಗೆ ಈ ಬಗ್ಗೆ ಇನ್ನೂ ಸುತ್ತೋಲೆ ಬಂದಿಲ್ಲ. ವಾರ್ಷಿಕ ಪರೀಕ್ಷೆಯಾಗಿರುವುದರಿಂದ ವಿಷಯವಾರು 100 ಅಂಕ ಇರಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ಎರಡೂ ಸೆಮಿಸ್ಟರ್‌ಗಳ ಪಠ್ಯಪುಸ್ತಕ ಓದಬೇಕಾಗುತ್ತದೆ.

ಸಿದ್ಧತೆಗೆ ಆದೇಶ
ಜಿಲ್ಲೆಯಲ್ಲಿ 7ನೇ ತರಗತಿ ಪಬ್ಲಿಕ್‌ ಪರೀಕ್ಷೆ ಬರೆಯಲು ಅಗತ್ಯವಿರುವ ತಯಾರಿ ನಡೆಸಲು ಶಿಕ್ಷಕರಿಗೆ ಆದೇಶ ನೀಡಲಾಗಿದೆ. ವಿದ್ಯಾರ್ಥಿಗಳು ಹೆದರಿಕೊಳ್ಳುವ ಅಗತ್ಯವಿಲ್ಲ, ಸಾಮಾನ್ಯ ಪರೀಕ್ಷೆಯಂತೆ ಇರಲಿದೆ.
– ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ

ಏಕಾಏಕಿ ನಿರ್ಧಾರ ಸರಿಯಲ್ಲ
ಏಕಾಏಕಿ ಈ ನಿರ್ಧಾರ ಸರಿಯಲ್ಲ.ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ವರ್ಷದ ಪ್ರಾರಂಭದಲ್ಲಿ ಈ ಕುರಿತು ಘೋಷಣೆ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ.
– ವಿನೋದಾ, ಹೆತ್ತವರು

ಭಯವಾಗುತ್ತಿದೆ
ಮೊದಲ ಸೆಮಿಸ್ಟರ್‌ ಫ‌ಲಿತಾಂಶ ಸಿಕ್ಕಿದೆ. ಪಾಸಾಗಿದ್ದೇನೆ ಎನ್ನುವ ಖುಷಿಯಲ್ಲಿ ಇರುವಾಗ ಪಬ್ಲಿಕ್‌ ಪರೀಕ್ಷೆ ಎನ್ನುತ್ತಿದ್ದಾರೆ, ಭಯವಾಗುತ್ತಿದೆ.
 -ಮೇಘನಾ ನಾಯಕ್‌,
7ನೇ ವಿದ್ಯಾರ್ಥಿನಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next