ಹೊಸದಿಲ್ಲಿ : ಸಿಆರ್‌ಪಿಎಫ್ ಜವಾನರು ಮತ್ತು ಸಿಎಪಿಎಫ್ ಸಿಬಂದಿಗಳು ಈಗಿನ್ನು ತಮ್ಮ ಕರ್ತವ್ಯಕ್ಕೆ ಹಾಜರಾಗುವಾಗ ಅಥವಾ ರಜೆಯಲ್ಲಿ ಹೋಗುವಾಗ ಜಮ್ಮು-ಶ್ರೀನಗರ ಮತ್ತು ದಿಲ್ಲಿ – ಶ್ರೀನಗರ ಪ್ರಯಾಣವನ್ನು ವಾಣಿಜ್ಯ ವಿಮಾನದಲ್ಲೇ ಕೈಗೊಳ್ಳಬಹುದಾಗಿದೆ.
ಸಿಆರ್‌ಪಿಎಫ್ ಯೋಧರ ಸುರಕ್ಷೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಗೃಹ ಸಚಿವಾಲಯ ಅವರ ವಿಮಾನ ಪ್ರಯಾಣ ಅರ್ಹತೆಗೆ ಅನುಮೋದನೆ ನೀಡಿದೆ.
ಗೃಹ ಸಚಿವಾಲಯದ ಈ ನಿರ್ಧಾರದಿಂದಾಗಿ ಸುಮಾರು 7.8 ಲಕ್ಷ ಸಿಆರ್‌ಪಿಎಫ್ ಸಿಬಂದಿಗಳಿಗೆ ಪ್ರಯೋಜನವಾಗಲಿದೆ. ಈಗಿನ ನಿಯಮಗಳ ಪ್ರಕಾರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್, ಮತ್ತು ಸಹಾಯಕ ಎಸ್ ಐ ಮಟ್ಟದ ಸಿಬಂದಿಗಳಿಗೆ ವಿಮಾನ ಪ್ರಯಾಣದ ಅರ್ಹತೆ ಇಲ್ಲ.
ಗೃಹ ಸಚಿವಾಲಯದ ಈ ಹೊಸ ಘೋಷಣೆಯ ಪ್ರಕಾರ ಸಿಎಪಿಎಫ್ ಸಿಬಂದಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗುವಾಗ ಮತ್ತು ರಜೆಯಲ್ಲಿ ಜಮ್ಮು ಕಾಶ್ಮೀರದಿಂದ ಹೋಗುವಾಗ ಮತ್ತು ಮರಳಿ ಬರುವಾಗ ವಿಮಾನ ಪ್ರಯಾಣದ ಸೌಲಭ್ಯಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ.
ಕೇಂದ್ರ ಗೃಹ ಸಚಿವಾಲಯದ ಈ ನಿರ್ಧಾರವನ್ನು ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿ ಮುಖ್ಯಸ್ಥರಿಗೆ ತಲುಪಿಸಲಾಗಿದೆ ಮತ್ತು ಇದು ಈ ಕೂಡಲೇ ಜಾರಿಗೆ ಬಂದಿರುತ್ತದೆ ಎಂದು ಇಂದು ಗುರುವಾರ ಸಾರ್ವಜನಿಕರಿಗೆ ಉಪಲಬ್ಧಗೊಳಿಸಲಾಗಿರುವ ಪತ್ರದಲ್ಲಿ ತಿಳಿಸಲಾಗಿದೆ.