ಕಲಬುರಗಿ: ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಾಲೆಗಳ ನಡುವಿನ ಸಂಘರ್ಷದಿಂದ 77 ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಪರೀಕ್ಷೆಗೆ ಎರಡೇ ದಿನಗಳು ಬಾಕಿಯಿದ್ದರೂ ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ.
ಶಾಲೆಗಳ ಮಾನ್ಯತೆ ನವೀಕರಣ ಮಾಡದ ಮತ್ತು ಶಾಲಾ ತರಗತಿಗಳನ್ನು ನಡೆಸದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ನಾಲ್ಕು ಖಾಸಗಿ ಶಾಲೆಗಳ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿಲ್ಲ. ಇದು ಗೊತ್ತಿದ್ದೂ ಆಡಳಿತ ಮಂಡಳಿಯವರು ಇಷ್ಟು ದಿನ ಮೌನ ವಹಿಸಿದ್ದು, ಇದೀಗ ಕೊನೆ ಗಳಿಗೆಯಲ್ಲಿ ಹಾಲ್ ಟಿಕೆಟ್ ನೀಡಿಲ್ಲ ಎಂದು ಜಿಲ್ಲಾ ಶಿಕ್ಷಣ ಇಲಾಖೆ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಇತ್ತ, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಇದು ಶಾಲೆಗಳೇ ಮಾಡಿಕೊಂಡ ಎಡವಟ್ಟು ಆಗಿದೆ. ಆಗಸ್ಟ್ ತಿಂಗಳಿನಲ್ಲೇ ಮಾನ್ಯತೆ ನವೀಕರಣ ಹಾಗೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ನೋಂದಣಿ ಅವಕಾಶ ಇತ್ತು. ಈ ಎಲ್ಲ ಪ್ರಕ್ರಿಯೆಗಳನ್ನು ಆಯಾ ಶಾಲೆಗಳು ಆನ್ ಲೈನ್ ನಲ್ಲಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಯಾವ ಶಾಲೆಗಳು?: ಕಲಬುರಗಿ ದಕ್ಷಿಣ ವಲಯದ ಶಾಂತಿನಿಕೇತನ ಪ್ರೌಢಶಾಲೆಯ 24 ವಿದ್ಯಾರ್ಥಿಗಳು, ಅರ್ಚನಾ ಪ್ರೌಢ ಶಾಲೆಯ 6 ವಿದ್ಯಾರ್ಥಿಗಳು, ಕಲಬುರಗಿ ಉತ್ತರ ವಲಯದ ಮಹೆಬೂಬ ಸುಬಾನಿ ಪ್ರೌಢ ಶಾಲೆಯ 27 ವಿದ್ಯಾರ್ಥಿಗಳು ಮತ್ತು ಸಂಜೀವಿನಿ ಕನ್ನಡ ಪ್ರೌಢ ಶಾಲೆಯ 20 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ.
ಸದ್ಯ ವಿದ್ಯಾರ್ಥಿಗಳ ಭವಿಷ್ಯ ಮತ್ತು ಮುಂದಿನ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಡಿಡಿಪಿಐ ಕಚೇರಿಯಿಂದ ಪತ್ರ ಬರೆಯಲಾಗಿದೆ. ಶಿಕ್ಷಣ ಇಲಾಖೆಯ ನಿರ್ದೇಶಕರ ಮೇಲೆ ವಿದ್ಯಾರ್ಥಿಗಳ ಪರೀಕ್ಷಾ ಭವಿಷ್ಯ ನಿಂತಿದೆ.