ನವದೆಹಲಿ: ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ಸಂಜೆ ಚೀನಾದ ಸೈನಿಕರೊಂದಿಗಿನ ನಡೆದ ಘರ್ಷಣೆಯಲ್ಲಿ ಭಾರತದ 76 ಸೈನಿಕರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಗಾಯಗೊಂಡ ಸೈನಿಕರಲ್ಲಿ 18 ಮಂದಿ ಲೇಹ್ ನ ಆಸ್ಪತ್ರೆಯಲ್ಲಿದ್ದು, ಎಲ್ಲರೂ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ಒಂದು ವಾರದಲ್ಲಿ ಕರ್ತವ್ಯಕ್ಕೆ ಮರಳರಿದ್ದಾರೆ. ಉಳಿದ 56 ಮಂದಿ ಸೈನಿಕರೂ ಕೂಡ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು ಶೀಘ್ರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಲ್ ಬಿ.ಕೆ ಸಂತೋಷ್ ಬಾಬು ನೇತೃತ್ವದ ಸೇನಾ ಪಡೆಗಳು ಭಾರತದ ಗಡಿಯಲ್ಲಿ, ಚೀನಾದ ಸೈನ್ಯಕ್ಕೆ ಸೇರಿದ ಡೇರೆ ತೆಗೆಯಲು ಯತ್ನಿಸಿದ ನಂತರ ಸೋಮವಾರ ಸಂಜೆ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಸೈನಿಕರು ಹುತಾತ್ಮರಾಗಿದ್ದರು. ಇದೇ ವೇಳೆ ಚೀನಾದ 45 ಸೈನಿಕರು ಕೂಡ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ ಭಾರತದ ಯಾವುದೇ ಸೈನಿಕರು ಕೂಡ ಕಣ್ಮರೆಯಾಗಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.