ಬೆಂಗಳೂರು: ಬೆಳ್ಳಂದೂರು ಕೆರೆ ಸುತ್ತಮುತ್ತ ದ್ರವ ತ್ಯಾಜ್ಯ ಸಂಸ್ಕರಣಾ ಘಟಕ (ಇಟಿಪಿ) ಹೊಂದಿಲ್ಲದ 76 ಕೈಗಾರಿಕೆಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಬೀಗಮುದ್ರೆ ಹಾಕಿದ್ದರೆ ಇದೀಗ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಇತ್ತೀಚೆಗೆ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಕ್ರಮ ಕೈಗೊಂಡಿರುವ ಮಂಡಳಿಯು ನೀರಿನ ಸಂಪರ್ಕವನ್ನೂ ಕಡಿತಗೊಳಿಸಲು ಸಿದ್ಧತೆ ನಡೆಸಿದೆ. ಇನ್ನೊಂದೆಡೆ ಕೊಳಚೆ ನೀರು ಸಂಸ್ಕರಣಾ (ಎಸ್‌ಟಿಪಿ) ಘಟಕ ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್‌ಗಳು ಹಾಗೂ ವಸತಿ ಸಂಕೀರ್ಣಗಳ ಪತ್ತೆಗೆ ಜಂಟಿ ತಪಾಸಣೆ ಕಾರ್ಯ ಮುಂದುವರಿದಿದ್ದು ಎರಡು ವಾರಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
“ಬೆಳ್ಳಂದೂರು ಕೆರೆ ಸುತ್ತಮುತ್ತಲ 76 ಕೈಗಾರಿಕೆಗಳಿಗೆ ಬೀಗಮುದ್ರೆ ಹಾಕಲಾಗಿದೆ. ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಹಾಗೆಯೇ ನೀರಿನ ಸಂಪರ್ಕ ಕಡಿತಕ್ಕೂ ಸಿದ್ಧತೆ ನಡೆದಿದೆ. ಎಸ್‌ಟಿಪಿ ಸೌಲಭ್ಯ ಹೊಂದಿಲ್ಲದ ಅಪಾರ್ಟ್‌ಮೆಂಟ್, ವಸತಿ ಸಂಕೀರ್ಣ ಪತ್ತೆಗೆ ಜಂಟಿ ತಪಾಸಣೆ ನಡೆದಿದ್ದು, ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.
ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಪಟ್ಟಂತೆ ಕಳೆದ ವಾರ ವಿಚಾರಣೆ ನಡೆಸಿದ ಎನ್‌ಜಿಟಿಯು ಇಟಿಪಿ ಅಳವಡಿಸಿಕೊಳ್ಳದ ಕೈಗಾರಿಕೆಗಳನ್ನು ಪತ್ತೆ ಹಚ್ಚಿ ಇಟಿಪಿ ಅಳವಡಿಕೆಗೆ ಕಾಲಾವಕಾಶ ನೀಡಿ ನಂತರವೂ ಸ್ಪಂದಿಸದಿದ್ದರೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.
ಹಾಗೆಯೇ ಎಸ್‌ಟಿಪಿಯನ್ನು ಗಡುವು ಅವಧಿಯೊಳಗೆ ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್, ವಸತಿ ಸಮುಚ್ಚಯಗಳಿಗೂ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಎನ್‌ಜಿಟಿ ತಾಕೀತು ಮಾಡಿತ್ತು. ಆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ.