Advertisement
ಇಡೀ ವಿಶ್ವವೇ ಎದುರಿಸಿದ ಒಂದು “ಮಹಾ ಆಕ್ರಮಣ”ಕ್ಕೆ ಭಾರತವೂ ಈಡಾಯಿತು. ಕೋವಿಡ್ ದಾಳಿ ಇತರರಿಗಿಂತ ಹೆಚ್ಚು ಕಾಡಿದ್ದೇ ನಮ್ಮ ದೇಶವನ್ನು ಎಂದೆನಿಸುತ್ತದೆ. ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ನೆಲೆಯೂರಲು ಪ್ರಬಲ ಪ್ರಯತ್ನದಲ್ಲಿದ್ದ ನಮ್ಮನ್ನು ಹಿನ್ನಡೆಗೆ ಸರಿಸುವಲ್ಲಿ ಒಂದು ಪುಟ್ಟ ವೈರಸ್ ದೈತ್ಯ ಶಕ್ತಯಾಯಿತು. ಪರಿಣಾಮವಾಗಿ ದೇಶದ ಆರ್ಥಿಕ ಪರಿಸ್ಥಿತಿಯೇ ದಿಕ್ಕೆಟ್ಟು ಹೋಯಿತು.
Related Articles
Advertisement
ಈ ಕ್ಷಣದ ವರೆಗೂ ಶಾಲೆಗಳ ಪುನರಾರಂಭದ ದಿನಾಂಕಗಳು ಸ್ಪಷ್ಟವಿಲ್ಲದ ಸಂದರ್ಭದಲ್ಲಿ ಸ್ವಾತಂತ್ರ್ಯ ಗೀತೆಯನ್ನು ಹಾಡುವುದಾರರೂ ಹೇಗೆ ?
ರಸ್ತೆಗಿಳಿಯದ ಬಸ್ಸು ರಿಕ್ಷಾಗಳಿಗೆ ಹಿಡಿದು ತುಕ್ಕುಗಳು ಸಾಮಾನ್ಯ ಜನತೆಯ ಗೋಳಿನ ಸಂಕೇತವೂ ಹೌದು. ಬದುಕು ಕಟ್ಟಿಕೊಳ್ಳಲು ಪೇಟೆ ಪಟ್ಟಣ ಸೇರಿದ್ದ ಮಂದಿ ಮರಳಿ ಊರ ದಾರಿ ಹಿಡಿದಾಗ ಆಗಿರುವ ಏರು ಪೇರನ್ನು ಸಮತಟ್ಟು ಗೊಳಿಸುವ ಯಾವ ಸಮರ್ಪಕ ಯೋಜನೆಗಳೂ ಇಲ್ಲದಿರುವಾಗ ದೇಶ ಪ್ರೇಮದ ಘೋಷಣೆಗಳ ಸದ್ದಿಗೆ ತೂಕವಾದರೂ ಎಲ್ಲಿಂದ ?
ಕನಿಷ್ಟ ಕೋವಿಡ್ ಲಸಿಕೆ ಪಡೆಯಲೂ ರಾಜಕೀಯ ಶಿಪಾರಸ್ಸು ಬೇಕಾಗಿರುವ ಸನ್ನಿವೇಶದಲ್ಲಿ ಕೊರೋನಾ ನಿಯಂತ್ರಣದ ಜಾಹೀರಾತುಗಳಿಗೆ ಕೋಟಿಗಟ್ಟಲೆ ವ್ಯಯಿಸುತ್ತಾ ಮಾಸ್ಕು ಧರಿಸದ ಬಡಪಾಯಿಗಳಿಗೆ ಬಲೆ ಬೀಸುತ್ತಾ ರಾಜಕೀಯ ಕೆಸರೆರಚಾಟದಲ್ಲಿ “ಅಂತರ” ಮರೆತಿರುವ ನಾಯಕರ ನಡುವೆ ನಾವು ಧ್ವಜ ಹಾರಿಸಬೇಕಾಗಿದೆ !
ಮುಚ್ಚಿರುವ ಶಾಲಾ ಬಾಗಿಲುಗಳ ಹೊರಗೆ ಹೊಸ ಶಿಕ್ಷಣ ನೀತಿಯ ಚರ್ಚೆಗಳು ಸಾಗಿವೆ. ಲೆಕ್ಕ ತಪ್ಪಿದ ಕೋವಿಡ್ ಸಾವಿನ ಸಂಖ್ಯೆಗಳ ನಡುವೆ ಇಂಧನ ಬೆಲೆ ಮಸುಕಾಗಿದೆ. ಅತಿವೃಷ್ಟಿಯ ನೆರೆ ನೀರಿನಲ್ಲಿ ಕರಗಿ ಹೋದ ರೈತನ ಕಣ್ಣೀರು ಇಂಗಿ ಹೋಗಿದೆ.
ಮುಕ್ಕಾಲು ಶತಮಾನದ ಬಳಿಕ ಮತ್ತೊಮ್ಮೆ ತಿರುಗಿ ನೋಡಿದರೆ ನಮ್ಮ ರಾಷ್ಟ್ರೀಯ ಬೆಳವಣಿಗೆ ಎಷ್ಟು ತೃಪ್ತಿಕರ ? ಪಾರ್ಲಿಮೆಂಟು ಕಟ್ಟಡವನ್ನು ಬದಲಾಯಿಸುವ ಹಾಗೆ ನಮ್ಮ ರಾಜಕೀಯ ನೀತಿಗಳನ್ನು ಬದಲಾಯಿಸಬಹುದೆ ? ಶಿಕ್ಷಣ ನೀತಿಗಳಲ್ಲಿ ಹೊಸತನ ತಂದಷ್ಟೇ ಸುಲಭದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ನವೀಕರಿಸಬಹುದೇ ? ಮಂತ್ರಿಗಳನ್ನು ಬದಲಾಯಿಸಿದಷ್ಟೇ ಸರಳವಾಗಿ ಆಡಳಿತ ಶೈಲಿಯಲ್ಲಿ ಹೊಸತನ ತರಬಹುದೇ ?
ನೆಟ್ ವರ್ಕ್ ಇಲ್ಲದ ಹಳ್ಳಿಗಳಲ್ಲಿ ಡಿಜಿಟಲ್ ಇಂಡಿಯಾದ ಫ್ಲೆಕ್ಸ್ ಹಾಕುವ ನಾವು ಬುಲೆಟ್ ರೈಲುಗಳ ಕನಸು ಕಾಣುತ್ತೇವೆ! ಆಧಾರ್ ಕಾರ್ಡ್ ತಿದ್ದುಪಡಿಗೆ ದಿನವಿಡೀ ಕ್ಯೂ ನಿಲ್ಲುತ್ತಾ ಆನ್ ಲೈನ್ ಕ್ಲಾಸಿಗೆ ಮೊಬೈಲ್ ಇಲ್ಲದ, ಸಂವೇದ ಕ್ಲಾಸ್ ನೋಡಲು ಟಿವಿ ಇಲ್ಲದ ಮನೆಗಳ ಕುರಿತು ಮೌನವಹಿಸುತ್ತೇವೆ!
ನೂರಾರು ವಸತಿ ಹೀನರ ಅರ್ಜಿಗಳನ್ನು ಪೇರಿಸಿಟ್ಟುಕೊಂಡಿರುವ ಗ್ರಾಮ ಪಂಚಾಯತ್ ಗಳು ,ಅಕ್ರಮ-ಸಕ್ಲಮ, 94ಸಿ,94ಸಿಸಿ ವಿಲೇವಾರಿಗೆ ಕಾಲ ವ್ಯಯಿಸುವ ಇಲಾಖೆಗಳು ಪದೇ ಪದೇ ದರ ಏರಿಸಿಯೂ ಖಾಸಗೀ ತೆಕ್ಕೆಗೆ ಜಾರುತ್ತಿರುವ ವಿದ್ಯುತ್ ವಿಭಾಗ, ಬಂಡವಾಳಶಾಹಿಗಳ ಆಕ್ರಮಣಕ್ಕೆ ನಲುಗುತ್ತಿರುವ ಸಾಮಾನ್ಯ ವ್ಯಾಪಾರೀ ವರ್ಗ ಮತ್ತು ರಾಜ ರಸ್ತೆಗಳಲ್ಲೇ ಅತ್ಯಾಚಾರಕ್ಕೊಳಪಡುವ ಹೆಣ್ಣು ಮಗು !
ಇದಲ್ಲ ನಮ್ಮ ಭಾರತ ! ಒಂದೇ ಒಂದು ಒಲಿಂಪಿಕ್ ಚಿನ್ನದ ಪದಕಕ್ಕೆ ನೂರಾ ಮೂವತ್ತು ಕೋಟಿ ಜನತೆಯ ಆಶೋತ್ತರಗಳನ್ನು ಲೇಪಿಸಿ 75ನೇ ಸ್ವಾತಂತ್ರ್ಯ ಧ್ವಜವನ್ನು ಹಿಂದೆಂದಿಗಿಂತಲೂ ಹೆಚ್ಚು ಎತ್ತರದಲ್ಲಿ ಆರೋಹಿಸಬಹುದು. ಆದರೆ ಎದೆಯೊಳಗೊಂದು ಮಥನ ನಡೆಯದಿದ್ದರೆ ಹೇಗೆ !
ಲೇಖನ : ರಮೇಶ್ ಗುಲ್ವಾಡಿ.