ನವದೆಹಲಿ: ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯಲ್ಲಿರುವ ಈ ಸಮಯದಲ್ಲಿ ಬಾಹ್ಯಾಕಾಶದಲ್ಲಿಯೂ ತ್ರಿವರ್ಣ ಧ್ವಜ ಹಾರಿಸಲು ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಸಿದ್ಧವಾಗಿದೆ.
ಆ.7ರಂದು ಉಪಗ್ರಹವೊಂದರ ಜತೆ ತ್ರಿವರ್ಣ ಧ್ವಜವನ್ನು ಹೊತ್ತ ರಾಕೆಟ್ ನಭಕ್ಕೆ ನೆಗೆಯಲಿದ್ದು, ಬಾಹ್ಯಾಕಾಶದಲ್ಲಿ ತ್ರಿವರ್ಣ ಹಾರಿಸಲಿದೆ.
ವಿಶೇಷವಾಗಿ ಎಸ್‌ಎಸ್‌ಎಲ್‌ವಿ(ಸ್ಮಾಲ್ ಸೆಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಮೂಲಕ “ಆಜಾದಿಸ್ಯಾಟ್’ ಹೆಸರಿನ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಈ ಉಪಗ್ರಹದಲ್ಲಿ 75 ಪೇಲೋಡ್ ಇದ್ದು, ಅದನ್ನು 75 ಗ್ರಾಮೀಣ ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ತಯಾರಿಸಿದ್ದಾರೆ.
ಗ್ರಾಮೀಣ ಬಡ ಹೆಣ್ಣು ಮಕ್ಕಳಲ್ಲೂ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಅವರಿಂದಲೇ ಈ ಪೇಲೋಡ್ ತಯಾರಿ ಮಾಡಿಸಲಾಗಿದೆ. ಧ್ವಜದ ಜತೆ ಈ ವಿಶೇಷ ಉಪಗ್ರಹವನ್ನು ಆ.7ರಂದು ಶ್ರೀಹರಿಕೋಟದ ಉಪಗ್ರಹ ಉಡಾವಣಾ ಕೇಂದ್ರದಿಂದ ಬೆಳಗ್ಗೆ 9.18ಕ್ಕೆ ಉಡಾವಣೆ ಮಾಡಲಾಗುವುದು.
ಮಂಗಳಯಾನ ಬಗ್ಗೆ ಸಂಸ್ಕೃತ ಸಿನಿಮಾ
ಭಾರತದ ಹೆಮ್ಮೆಯ ಮಂಗಳಯಾನದ ಬಗ್ಗೆ ಸಂಸ್ಕೃತ ಭಾಷೆಯಲ್ಲಿ “ಯಾನಂ’ ಹೆಸರಿನ ಸಿನಿಮಾ ತಯಾರಿಸಲಾಗಿದ್ದು, ಅದು ಆ.21ರಂದು ಚೆನ್ನೈನಲ್ಲಿ ತೆರೆ ಕಾಣಲಿದೆ. ಇದೇ ಮೊದಲನೇ ಬಾರಿಗೆ ಸಂಸ್ಕೃತ ಭಾಷೆಯಲ್ಲಿ ವಿಜ್ಞಾನದ ಕುರಿತಾದ ಸಿನಿಮಾ ನಿರ್ಮಾಣವಾಗಿದೆ.
ವಿನೋದ್ ಮಂಕರ ಅವರು ನಿರ್ದೇಶಿಸಿರುವ ಸಿನಿಮಾವನ್ನು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾ ಒಟ್ಟು 45 ನಿಮಿಷಗಳಿದ್ದು, ಸಾಕ್ಷ್ಯಚಿತ್ರದ ರೂಪದಲ್ಲಿದೆ.