Advertisement

75 ನೇ ಸ್ವಾತಂತ್ರ್ಯೋತ್ಸವ ವೈಶಿಷ್ಟ್ಯಪೂರ್ಣ ಆಚರಣೆ

07:45 AM Jan 01, 2021 | Team Udayavani |

2021ರ ಆಗಸ್ಟ್‌ 15ರಂದು ಭಾರತ ತನ್ನ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಈ ವರ್ಷದ ಆಗಸ್ಟ್‌ 15ರಿಂದ ವರ್ಷವಿಡೀ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಹಮ್ಮಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ. 74 ವರ್ಷಗಳ ಅವಧಿಯಲ್ಲಿ ದೇಶ ಸಾಧಿಸಿದ ಪ್ರಗತಿ, ಆಡಳಿತ ವ್ಯವಸ್ಥೆಯಲ್ಲಿನ ಸುಧಾರಣೆಗಳು, ತಂತ್ರಜ್ಞಾನ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು, ನೀತಿ ನಿರೂಪಣ ಕ್ರಮಗಳನ್ನು ಪ್ರತಿಬಿಂಬಿಸುವುದು ಅದರ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ಆ.15ರಂದು ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಆಯಾಯ ಇಲಾಖೆಗಳಡಿ ಜಾರಿಗೊಳಿಸಲಾದ 10 ಮಹತ್ವಪೂರ್ಣ ಯೋಜನೆ ಅಥವಾ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. 2022ರ ಆಗಸ್ಟ್‌ 15ರೊಳಗಾಗಿ 20,404 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಮಿಷನ್‌ನಡಿ ವಿವಿಧ ಇಲಾಖೆಗಳು 163 ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಿವೆ. ನಗರದ ಬಯಲು ಪ್ರದೇಶಗಳಲ್ಲಿ 75 ಸೌರ ಮರಗಳ ನಿರ್ಮಾಣ, 10 ಆಯ್ದ ಪಾರ್ಕ್‌ಗಳನ್ನು ಅಮೃತ ಮಹೋತ್ಸವ ಮಾದರಿಯ ಪಾರ್ಕ್‌ಗಳಾಗಿ ಅಭಿವೃದ್ಧಿ, 75,000 ಔಷಧೀಯ ಮತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ “ಹಸುರು ದೇಶ’ ಅಭಿಯಾನಕ್ಕೆ ಚಾಲನೆ, ದೇಶದಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನಗಳ ಬಗೆಗಿನ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡ “ಗ್ಲೋಬಲ್‌ ಟೆಕ್‌ ಫೆಸ್ಟಿವಲ್‌’ ಆಯೋಜನೆ, ಕೆರೆ, ಸರೋವರಗಳ ಪುನರಜ್ಜೀವನ, ಸ್ಮಾರ್ಟ್‌ ಶಾಲೆ, ಡಿಜಿಟಲ್‌ ಗ್ರಂಥಾಲಯಗಳ ಸ್ಥಾಪನೆ ಇತ್ಯಾದಿ ಕೆಲವು ಪ್ರಮುಖ ಯೋಜನೆಗಳು.

Advertisement

ಗಣರಾಜ್ಯೋತ್ಸವ: ಬ್ರಿಟನ್‌ ಪ್ರಧಾನಿ ಅತಿಥಿ
ಭಾರತ 72ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ಜಿ-7 ಶೃಂಗ ಸಭೆಗೆ ಪ್ರಧಾನಿ ಮೋದಿ ಅವರಿಗೆ ಬೋರಿಸ್‌ ಅಧಿಕೃತ ಆಹ್ವಾನ ನೀಡಿದ್ದಾರೆ. ಬ್ರಿಟನ್‌ ಈಗಷ್ಟೇ ಐರೋಪ್ಯ ಒಕ್ಕೂಟದಿಂದ ಹೊರ ಬಂದಿದ್ದು, ಜಗತ್ತಿನ ಎಲ್ಲ ದೇಶಗಳ ಜತೆಗೆ ಬಾಂಧವ್ಯ ವೃದ್ಧಿಗೆ ಕಾತರವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ಪ್ರಧಾನಿಗಳ ಪ್ರವಾಸ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಮುಖ್ಯವಾಗಿ ಕೋವಿಡ್‌ ಬಳಿಕ ಉಭಯ ದೇಶಗಳ ಗಣ್ಯರು ಪಾಲ್ಗೊಳ್ಳುವ ಪ್ರಮುಖ ಸಮಾರಂಭ ಇದಾಗಿದೆ.

ಅಮೆರಿಕ: ಜೋ ಬೈಡೆನ್‌ ಯುಗ ಆರಂಭ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪೂರ್ಣ ಪ್ರಕ್ರಿಯೆ ಮುಗಿದಿದ್ದು, ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್‌ ಗೆಲುವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಜ. 20ರಂದು “ದೊಡ್ಡಣ್ಣ’ ಅಮೆರಿಕದ ನೂತನ ಅಧ್ಯಕ್ಷರಾಗಿ ಬೈಡೆನ್‌ ಮತ್ತು ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ಕ್ಯಾಪಿಟಲ್‌ ಭವನದ ಹೊರಗೆ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕೊನೇ ಕ್ಷಣದಲ್ಲಿ ಸ್ಥಳ ಬದಲಾವಣೆ ಆದರೂ ಆಗಬಹುದು.

ಕೇಂದ್ರ ಬಜೆಟ್‌ ಮೇಲೆ ಭರಪೂರ ನಿರೀಕ್ಷೆ
ಕಳೆದ ವರ್ಷವಿಡೀ ದೇಶ ಮಾತ್ರವಲ್ಲದೆ ಜಾಗತಿಕ ಅರ್ಥ ವ್ಯವಸ್ಥೆಯನ್ನೇ ಅಲುಗಾ ಡಿಸಿದ್ದ ಕೋವಿಡ್‌ ಮಹಾಮಾರಿಯ ಬಳಿಕ ಆರ್ಥಿಕತೆ ತುಸು ಚೇತರಿಕೆಯನ್ನು ಕಾಣತೊಡಗಿದೆ. ಈ ಹಿನ್ನೆಲೆಯಲ್ಲಿ ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಸರಕಾರದ ಮುಂಗಡ ಪತ್ರದ ಮೇಲೆ ಜನರ ನಿರೀಕ್ಷೆಗಳು ಸಾಕಷ್ಟಿವೆ. ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳು, ರೈತರಿಗೆ ಮತ್ತು ಮಧ್ಯಮ ವರ್ಗದವರಿಗಾಗಿ ಹಲವಾರು ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ, ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಪರ್ಯಾಯ ಕ್ರಮಗಳನ್ನು ಘೋಷಿ ಸುವ ಸಾಧ್ಯತೆ ಇದೆ. ಹಣಕಾಸು ಸಚಿವರು ಈ ಬಾರಿಯ ಬಜೆಟ್‌ ಈವರೆಗಿನ ಎಲ್ಲ ಮುಂಗಡ ಪತ್ರಗಳಿಗಿಂತ ವಿಭಿನ್ನವಾಗಿರಲಿದೆ ಎಂದಿದ್ದಾರೆ.

ಅಯೋಧ್ಯೆ: ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ
ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಬಾಬ್ರಿ ಮಸೀದಿಗಿಂತ 4 ಪಟ್ಟು ದೊಡ್ಡ ಗಾತ್ರದ ಮಸೀದಿ ನಿರ್ಮಾಣವಾಗಲಿದೆ. ಅಯೋಧ್ಯೆಯ 5 ಎಕ್ರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಮಸೀದಿ ಮತ್ತು ಇತರ ಸಂಕೀರ್ಣಗಳಿಗೆ ಸಂಬಂಧಿ ಸಿದ ನೀಲನಕ್ಷೆಯನ್ನು ಈಗಾಗಲೇ ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಬಿಡುಗಡೆ ಮಾಡಿದೆ. ಫೈಜಾಬಾದ್‌ ಪಂಚಾಯತ್‌ನ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಮಂಡಳಿ ಹೇಳಿದೆ. ಸದ್ಯದ ಮಾಹಿತಿಯಂತೆ ಜ. 26ರ ಗಣರಾಜ್ಯೋತ್ಸವದ ದಿನ ಮಸೀದಿಗೆ ಶಿಲಾನ್ಯಾಸ ನೆರವೇರಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ ಆ. 15ರ ಸ್ವಾತಂತ್ರ್ಯ ದಿನದಂದು ಈ ಸಮಾರಂಭವನ್ನು ಆಯೋಜಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement

ಮಸೀದಿಯು ಗೋಲಾಕಾರದಲ್ಲಿರಲಿದ್ದು, ಏಕಕಾಲಕ್ಕೆ 2,000 ಮಂದಿ ನಮಾಜ್‌ ಮಾಡಲು ಅವಕಾಶವಿರುವಂತೆ ಮಸೀದಿ ನಿರ್ಮಾಣ ಗೊಳ್ಳಲಿದೆ. 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸಂಕೀರ್ಣವು ಮಸೀದಿಗಿಂತ 6 ಪಟ್ಟು ಬೃಹತ್ತಾಗಿರಲಿದೆ. 3,500 ಚದರ ಮೀಟರ್‌ ಪ್ರದೇಶದಲ್ಲಿ ಮಸೀದಿ ನಿರ್ಮಾಣವಾದರೆ, 24,150 ಚ.ಮೀ. ಪ್ರದೇಶದಲ್ಲಿ ಆಸ್ಪತ್ರೆ, ಸಮುದಾಯ ಅಡುಗೆ ಮನೆ ಮತ್ತು ಮ್ಯೂಸಿಯಂ ಮತ್ತು ಇತರ ಕಟ್ಟಡಗಳು ತಲೆ ಎತ್ತಲಿವೆ.

ರಾಮ ಮಂದಿರ ಕಾಮಗಾರಿ ಚುರುಕು
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರದ ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಈ ವರ್ಷ ಮತ್ತಷ್ಟು ಭರದಿಂದ ಕೆಲಸ ಕಾರ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next