ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಎದುರಿಸುವ ಉದ್ದೇಶಕ್ಕಾಗಿ ಗಿವ್ ಇಂಡಿಯಾ ಸಂಸ್ಥೆಯು 750 ಆಮ್ಲಜನ ಸಾಂದ್ರಕಗಳನ್ನು ದೇಣೀಗೆಯಾಗಿ ನೀಡಿದೆ.
ಕೃಷ್ಣಾದಲ್ಲಿ ಸೋಮವಾರ ಗೀವ್ ಇಂಡಿಯಾ ಫೌಂಡೇಶನ್ ಸಿಇಒ ಅತುಲ್ ಸತೀಜಾ, ಫೌಂಡೇಶನ್ ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಸಾಂದ್ರಕಗಳನ್ನು ಹಸ್ತಾಂತರ ಮಾಡಿದರು.
ಹಸ್ತಾಂತರದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, ಈ ಸಾಂದ್ರಕಗಳನ್ನು ಡಿ.ಎಂ.ನಂಜುಂಡಪ್ಪ ಅವರ ವರದಿಯಲ್ಲಿ ಪಟ್ಟಿ ಮಾಡಿರುವ ಅತ್ಯಂತ ಹಿಂದುಳಿದ 114 ತಾಲೂಕು ಆಸ್ಪತ್ರೆಗಳಿಗೆ ನೀಡಲಾಗುವುದು ಎಂದರು.
ಬಳ್ಳಾರಿ, ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಗೀವ್ ಇಂಡಿಯಾ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಗೀವ್ ಇಂಡಿಯಾ ನೆರವು ನೀಡುತ್ತಿದ್ದು, ಈ ಮೊದಲು ಉತ್ತರಹಳ್ಳಿ, ಅಂಜನಾಪುರ, ಕಲ್ಯಾಣನಗರದಲ್ಲಿ ಸ್ಥಾಪನೆ ಮಾಡಲಾಗಿರುವ ಕೋವಿಡ್ ಕೇರ್‌ಗಳಿಗೆ ವೈದ್ಯರು, ಸಿಬ್ಬಂದಿ ಜತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿತ್ತು. ಇದುವರೆಗೂ 47 ಕೋಟಿಗೂ ಹೆಚ್ಚು ಮೊತ್ತದ ಸಾಂದ್ರಕಗಳನ್ನು ನೀಡಿದ್ದಾರೆ ಎಂದರು.
ಗೀವ್ ಇಂಡಿಯಾ ದೇಶಾದ್ಯಂತ ಕೋವಿಡ್ ಎದುರಿಸಿಲು ನೆರವು ನೀಡುತ್ತಿದೆ. ಈಗ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗೀವ್ ಇಂಡಿಯಾ ಸಂಸ್ಥೆ ಭಿತ್ತಿಪತ್ರವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಹಿರಿಯ ಅಧಿಕಾರಿಗಳು, ಗೀವ್ ಇಂಡಿಯಾ ಪ್ರತಿನಿಧಿಗಳು ಹಾಜರಿದ್ದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಸಿಎಸ್ಅರ್ ಸಲಹೆಗಾರ ಕೆ.ವಿ.ಮಹೇಶ, ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.